Home ಜಿಲ್ಲೆ ಮೈಸೂರು ಗೃಹ ಬಳಕೆ ಸಿಲಿಂಡರುಗಳಿಗೂ ಅಭಾವ ಸೃಷ್ಟಿ: ಗ್ರಾಹಕರಿಗೆ ಆತಂಕ

ಗೃಹ ಬಳಕೆ ಸಿಲಿಂಡರುಗಳಿಗೂ ಅಭಾವ ಸೃಷ್ಟಿ: ಗ್ರಾಹಕರಿಗೆ ಆತಂಕ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.16
: ಗೃಹ ಬಳಕೆಯ ಸಿಲಿಂಡರುಗಳ ಪೂರೈಕೆಗೆ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ ತಾಲೂಕು ವ್ಯಾಪ್ತಿಯಲ್ಲಿ ಗೃಹ ಬಳಕೆಯ ಸಿಲಿಂಡರುಗಳಿಗೂ ಅಭಾವ ಸೃಷ್ಠಿಯಾಗಿದೆ. ಗೃಹ ಬಳಕೆದಾರರು ಅಡುಗೆ ಅನಿಲದ ಸಿಲಿಂಡರುಗಳಿಗೆ ಮುಗಿ ಬೀಳುತ್ತಿದ್ದಾರೆ.


ಅಡುಗೆ ಅನಿಲದ ಗೃಹ ಬಳಕೆದಾರರು ನಿಯಮಾನುಸಾರ ತಮ್ಮ ಭಾಗದ ಸಿಲಿಂಡರ್ ಗೆ ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಬೇಕು. ಆದರೆ ಆನ್ ಲೈನ್ ಬುಕ್ಕಿಂಗ್ ಆಗುತ್ತಿಲ್ಲ. ಬುಕ್ಕಿಂಗ್ ಆಗದೆ ಸಿಲಿಂಡರ್ ದೊರೆಯದ ಕಾರಣ ಗೃಹಣಿಯರು ಆತಂಕಕ್ಕೆ ಸಿಲುಕಿದ್ದಾರೆ. ನಿಯಮಾನುಸಾರ 25 ದಿನ ಕಳೆದ ಅನಂತರವೂ ಆನ್ ಲೈನ್ ಬುಕ್ಕಿಂಗ್ ಆಗುತ್ತಿಲ್ಲ. ಅಡಿಗೆ ಅನಿಲ ಬುಕ್ಕಿಂಗ್‍ಗಾಗಿ ನಿರಂತರವಾಗಿ ಪ್ರಯತ್ನಿಸಿದರೆ ಒಂದು ದಿನಕ್ಕೊ ಎರಡು ದಿನಕ್ಕೊ ಬುಕ್ಕಿಂಗ್ ಸಂಪರ್ಕ ಆಗುತ್ತಿದೆ. ಇದರಿಂದ ಒಂದೇ ಸಿಲಿಂಡರ್ ಸಂಪರ್ಕ ಹೊಂದಿರುವ ಕುಟುಂಬಗಳು ಸಂಕಷ್ಠಕ್ಕೆ ಸಿಲುಕಿವೆ.


ಹೋಂ ಡಿಲೆವರಿ ಬಂದ್:- ಪಟ್ಟಣದಲ್ಲಿ ಇಂಡೇನ್, ಹೆಚ್.ಪಿ, ಭಾರತ್ ಗ್ಯಾಸ್ ಸೇರಿದಂತೆ ವಿವಿಧ ಅನಿಲ ಕಂಪನಿಗಳ ಗ್ರಾಹಕರು ಅವರ ಅದೃಷ್ಠದಿಂದ ಆನ್ ಲೈನ್ ಬುಕ್ಕಿಂಗ್ ಆದರೆ ಗ್ಯಾಸ್ ಏಜೆನ್ಸಿ ಅಂಗಡಿಗಳ ಮುಂದೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕು. ಗ್ಯಾಸ್ ಏಜೆನ್ಸಿಯವರು ಇದುವರೆಗೆ ನೀಡುತ್ತಿದ್ದ ಹೋಂ ಡಿಲೆವರಿ ರದ್ದುಪಡಿಸಿದ್ದಾರೆ. ಗ್ಯಾಸ್ ಏಜೆನ್ಸಿ ಮಾಲೀಕರು ಗ್ರಾಹಕರ ಯಾವುದೇ ಕರೆಗಳನ್ನು ಸ್ವೀಕರಿಸಿ ಗ್ರಾಹಕರಿಗೆ ಸಮರ್ಪಕ ಉತ್ತರ ನೀಡುತ್ತಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರುಗಳಿಗೆ ಮಾತ್ರ ಅಭಾವವಿದೆ ಎಂದು ನೆಮ್ಮದಿಯಾಗಿದ್ದ ಗೃಹಿಣಿಯರಿಗೆ ಇದೀಗ ಅಡುಗೆ ಅನಿಲದ ಅಭಾವದ ಬಿಸಿ ತಟ್ಟಲಾರಂಭಿಸಿದೆ. ಪಟ್ಟಣದಲ್ಲಿ ನಿರ್ಮಿಸಿರುವ ಶೇ.80 ರಷ್ಟು ಮನೆಗಳಲ್ಲಿ ಸೌದೆ ಒಲೆಗಳೇ ಇಲ್ಲ. ಹೊಸದಾಗಿ ಸೌದೆ ಒಲೆ ನಿರ್ಮಿಸಿಕೊಳ್ಳಲು ಬಹುತೇಕ ಮನೆಗಳಲ್ಲಿ ಜಾಗದ ಕೊರತೆಯಿದೆ. ಸಕಾಲಕ್ಕೆ ಸಿಲಿಂಡರ್ ದೊರೆಯದೆ ಇರುವುದು ಗೃಹಣಿಯರು ಮತ್ತು ಅವರ ಕುಟುಂಬಸ್ಥರಿಗೆ ಆತಂಕ ತಂದೊಡ್ಡಿದೆ.