
( ಮೇ೪ ಫಲಿತಾಂಶ)
ನವದೆಹಲಿ, ಮಾ.೧೫: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಭಾನುವಾರ ಪ್ರಕಟಿಸಿದೆ. ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಮೇ ೪ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ ೯ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನಲ್ಲಿ ಏಪ್ರಿಲ್ ೨೩ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ ೨೩ ಹಾಗೂ ಏಪ್ರಿಲ್ ೨೯ರಂದು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಈ ಐದು ರಾಜ್ಯಗಳ ಚುನಾವಣೆಯಲ್ಲಿ ಒಟ್ಟು ಸುಮಾರು ೧೭.೪ ಕೋಟಿ ಮತದಾರರು ಭಾಗವಹಿಸಲಿದ್ದು, ದೇಶದಾದ್ಯಂತ ಸುಮಾರು ೨.೧೯ ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎರಡು ಹಂತದ ಮತದಾನ
೨೯೪ ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಏಪ್ರಿಲ್ ೨೩ರಂದು ಮತ್ತು ಎರಡನೇ ಹಂತದ ಮತದಾನ ಏಪ್ರಿಲ್ ೨೯ರಂದು ನಡೆಯಲಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ೞದ್ಢಿ ನಡುವೆ ತೀವ್ರ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
ತಮಿಳುನಾಡಿನಲ್ಲಿ ಏಪ್ರಿಲ್ ೨೩ಕ್ಕೆ ಮತದಾನ
೨೩೪ ಸ್ಥಾನಗಳ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ ೨೩ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಮೈತ್ರಿ ಒಪ್ಪಂದಗಳು ಹಾಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ವೇಗಗೊಳಿಸಿವೆ.
ಅಸ್ಸಾಂ ಮತ್ತು ಕೇರಳದಲ್ಲಿ ಏಪ್ರಿಲ್ ೯ಕ್ಕೆ ಚುನಾವಣೆ
೧೨೬ ಸದಸ್ಯರ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ ೯ರಂದು ಮತದಾನ ನಡೆಯಲಿದೆ. ಕೇರಳದ ೧೪೦ ಸ್ಥಾನಗಳ ವಿಧಾನಸಭೆಯಲ್ಲಿ ಎಡಪಕ್ಷಗಳ ಲೆಪ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟುಕ್ ಫ್ರಂಟ್ ನಡುವೆ ಪೈಪೋಟಿ ನಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಮೈತ್ರಿಯೂ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದೆ.
ಪುದುಚೇರಿಯಲ್ಲೂ ಏಪ್ರಿಲ್ ೯ಕ್ಕೆ ಮತದಾನ
೩೦ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿ ವಿಧಾನಸಭೆಗೆ ಏಪ್ರಿಲ್ ೯ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಕಾಂಗ್ರೆಸ್, ಡಿಎಂಕೆ ಮತ್ತು ಸಿಪಿಐ ಮೈತ್ರಿಗೆ ಎದುರಾಗಿ ಆಲ್ಇಂಡಿಯಾ ಎನ್ಆರ್ ಕಾಂಗ್ರೆಸ್, ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಸ್ಪರ್ಧೆ ನಡೆಸಲಿದೆ.
ಚುನಾವಣಾ ದಿನಾಂಕಗಳ ಘೋಷಣೆಯೊಂದಿಗೆ ಸಂಬಂಧಿತ ರಾಜ್ಯಗಳಲ್ಲಿ ಮಾದರಿ ನಡವಳಿಕೆ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಚುನಾವಣೆಯನ್ನು ಸ್ವಚ್ಛ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಕೇಂದ್ರ ವೀಕ್ಷಕರನ್ನು ನಿಯೋಜಿಸಲಾಗಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಇದಲ್ಲದೆ, ಈ ರಾಜ್ಯಗಳ ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್ ತಿಂಗಳ ನಡುವೆ ಅಂತ್ಯಗೊಳ್ಳಲಿದೆ. ಪಶ್ಚಿಮ ಬಂಗಾಳ ವಿಧಾನಸಭೆಯ ಅವಧಿ ಮೇ ೭ಕ್ಕೆ, ತಮಿಳುನಾಡು ಮೇ ೧೦ಕ್ಕೆ, ಅಸ್ಸಾಂ ಮೇ ೨೦ಕ್ಕೆ, ಕೇರಳ ಮೇ ೨೩ಕ್ಕೆ ಹಾಗೂ ಪುದುಚೇರಿ ಜೂನ್ ೧೫ಕ್ಕೆ ಮುಕ್ತಾಯವಾಗಲಿದೆ.




























