Home ಜಿಲ್ಲೆ ಕಲಬುರಗಿ ಸಿಯುಕೆಯಲ್ಲಿ ಸಂಶೋಧನಾ ವಿಧಾನ ಕುರಿತ ಕಾರ್ಯಾಗಾರ

ಸಿಯುಕೆಯಲ್ಲಿ ಸಂಶೋಧನಾ ವಿಧಾನ ಕುರಿತ ಕಾರ್ಯಾಗಾರ

ಕಲಬುರಗಿ,ಮಾ.15: ಪರಿಣಾಮಕಾರಿ ಸಂಶೋಧನೆ ಮಾಡಲು ಸಂಶೋಧನಾ ವಿಧಾನಶಾಸ್ತ್ರದ ಉತ್ತಮ ಜ್ಞಾನ ಅತ್ಯಗತ್ಯ ಎಂದು ಸಿಯುಕೆಯ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಹೇಳಿದರು. ಅವರು ಸಿಯುಕೆಯ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಲಿರುವ ಕಾರ್ಯಾಗಾರದ ಕರಪತ್ರವನ್ನು ಬಿಡುಗಡೆ ಮಾಡಿದ ನಂತರ ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ “ವಿದ್ವಾಂಸರ ಸಂಶೋಧನಾ ಕೌಶಲ್ಯವನ್ನು ಚುರುಕುಗೊಳಿಸಲು ಮತ್ತು ನವೀಕರಿಸಲು ನಾವು ಆಗಾಗ್ಗೆ ಈ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸಬೇಕಾಗಿದೆ. ಸಂಶೋಧನಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ ಮತ್ತು ಎಐ ಇತ್ತೀಚಿನದು. ಪರಿಕಲ್ಪನಾತ್ಮಕ ಮತ್ತು ತಾಂತ್ರಿಕ ಕೌಶಲ್ಯಗಳ ಜೊತೆಗೆ, ಸಂಶೋಧನೆಯ ನೈತಿಕ ಅಂಶಗಳು ಸಹ ಬಹಳ ಮುಖ್ಯ. ಸಂಶೋಧಕರು ಸಂಶೋಧನೆಯಲ್ಲಿ ನೈತಿಕ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ” ಎಂದು ಅವರು ಹೇಳಿದರು.
ಕಾರ್ಯಾಗಾರದ ನಿರ್ದೇಶಕ ಡಾ. ಲಿಂಗಮೂರ್ತಿ ಮಾತನಾಡಿ ಸಂಶೋಧನಾ ವಿದ್ವಾಂಸರ ಪ್ರಸ್ತುತ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಗಾರದ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ದೇಶಾದ್ಯಂತದ ಪ್ರಸಿದ್ಧ ಸಂಸ್ಥೆಗಳಿಂದ ತಜ್ಞರನ್ನು ಆಹ್ವಾನಿಸುತ್ತಿದ್ದೇವೆ. ಕಾರ್ಯಾಗಾರವು ಮಾರ್ಚ್ 16 ರಿಂದ ಪ್ರಾರಂಭವಾಗಿ ಮಾರ್ಚ 25ರ ವರೆಗೆ ನಡೆಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಸ್ಕೇರಿಯಾ, ಕಾರ್ಯಾಗಾರದ ಸಹ ನಿರ್ದೇಶಕ ಡಾ. ಮಲ್ಲೇಶ್ ಮತ್ತು ಡಾ. ಬಸವರಾಜ ಎಂ.ಎಸ್ ಉಪಸ್ಥಿತರಿದ್ದರು.