
ಇಂಡಿ, ಮಾ. 15 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಪಂದನಾ ಆಸ್ಪತ್ರೆಯಲ್ಲಿ ಮಾ. 22 ರಿಂದ ಒಂದು ವರ್ಷದ ಅವಧಿ ವರೆಗೆ ಹೆಣ್ಣು ಮಗು ಜನಿಸಿದರೆ ಸಹಜ ಹೆರಿಗೆ ಹಾಗೂ ಸಿಜರಿನ್ ಹೆರಿಗೆಯನ್ನು ಸಂಪೂರ್ಣ ಉಚಿತವಾಗಿ ಮಾಡಲಾಗುವುದು ಎಂದು ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಲಕ್ಷ್ಮಿಕಾಂತ ಮೇತ್ರಿ ಹೇಳಿದರು.
ನಗರದ ರೈಲು ನಿಲ್ದಾಣ ರಸ್ತೆಯಲ್ಲಿ ಇರುವ ಸ್ಪಂದನಾ ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಅಸಂಘಟಿತ ಕಟ್ಟಡ ಕಾರ್ಮಿಕರು, ಬಿಪಿಎಲ್, ಎಪಿಎಲ್, ಸಾಮಾನ್ಯ ಮಹಿಳೆಯರಿಗೆ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ಸಂಪೂರ್ಣ ಉಚಿತ ಸೇವೆ ನೀಡುವ ಉದ್ದೇಶದಿಂದ ಹೊಸ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಜನರು ಹಾಗೂ ಪಕ್ಕದ ಮಹಾರಾಷ್ಟ್ರ ಗಡಿಯಲ್ಲಿ ವಾಸಿಸುವ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಹೆಣ್ಣು ತಾಯಿಯಾಗಿ ಬೇಕು. ಹೆಣ್ಣು ಹೆಂಡತಿಯಾಗಿ ಬೇಕು. ಹೆಣ್ಣು ಮಗುವಾಗಿ ಏಕೆ ಬೇಡ ಎಂಬ ಕೀಳರಿಮೆ ಹೋಗಲಾಡಿಸಲು ಸ್ಪಂದನಾ ಆಸ್ಪತ್ರೆ ಒಂದು ಹೆಜ್ಜೆ ಮುಂದೆ ಹೋಗಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು. ನಮ್ಮಲ್ಲಿ ಬಡತನ ರೇಖೆಗಿಂತ ಕೆಳಗೆ ಹೆಚ್ಚಿನ ಜನಸಂಖ್ಯೆ ಇದೆ. ಹೆಚ್ಚು ಜನರು ಉತ್ತಮ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ಹೆಣ್ಣು ಭ್ರೂಣಹತ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂಬ ಮೂಲ ಉದ್ದೇಶ ಹೊಂದಲಾಗಿದೆ. ಹೆಣ್ಣು ಮಗುವಿನ ಆರೈಕೆ ಆರೋಗ್ಯದ ಸೇವೆಗೆ ನಮ್ಮ ಸಹಾಯ ಹಸ್ತ. ಹೆಣ್ಣು ಮಗುವಿಗೆ ವಿಶೇಷ ಸ್ಥಾನಮಾನ ಸಿಗಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಅವರು ಹೇಳಿದರು.
ಹೆರಿಗೆ ಮಾಡಿಕೊಳ್ಳುವವರು ಕಡ್ಡಾಯವಾಗಿ ಆಧಾರ ಕಾರ್ಡ್ ತರಬೇಕು ಹಾಗೂ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಪ್ರಸೂತಿ ಯುವ ತಜ್ಞರು ಡಾ. ಐಶ್ವರ್ಯ ಅಶೋಕ ಹೊನವಾಡ ಎಂ ಬಿಬಿ ಎಸ್, ಎಂ ಎಸ್ (ಓಬಿಜಿ) ಎಐಐಎಂಎಸ್ ರೈಪುರ ಡಾ. ದತ್ತಾತ್ರೇಯ ಪಾಟೀಲ, ಡಾ. ರಂಜಿತ್ ನರರೋಗ ತಜ್ಞರು, ಡಾ. ಲಕ್ಷ್ಮಿಕಾಂತ ಜಾಧವ, ಡಾ. ಶಿವಾನಂದ ಸೋನಾವಣೆ ಉಪಸ್ಥಿತರಿದ್ದರು.



























