
ಜಮಖಂಡಿ: ಮಾ.15:
ನಗರದ ರಾಮತಿರ್ಥ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದರು.
ಮೊನ್ನೆ ಮಧ್ಯರಾತ್ರಿ ಸುಮಾರು 12 ರಿಂದ 1 ಗಂಟೆಯ ಅವಧಿಯಲ್ಲಿ ರಾಮತಿರ್ಥ ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದು ಗಸ್ತು ತಿರುಗುತ್ತಿದ್ದ ಗ್ರಾಮೀಣ ಪೆÇಲೀಸ್ ಠಾಣೆಯ ಅಪರಾಧ ವಿಭಾಗದ ಪಿ.ಎಸ್.ಐ ಎಂ.ಎ. ವಾಲೇಕಾರ ಹಾಗೂ ಪೆÇಲೀಸ್ ಸಿಬ್ಬಂದಿ ಆನಂದ ಮಾಳಿ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎನ್.ಪಿ. ಹುಗಾರ ಹಾಗೂ ಉಪವಲಯ ಅರಣ್ಯಾಧಿಕಾರಿ ವಿನೋದ ಜೈನಾಪುರ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಸುಮಾರು 3 ರಿಂದ 4 ಕಿ.ಮೀ ವ್ಯಾಪ್ತಿಗೆ ಬೆಂಕಿ ಪಸರಿಸಿ ಹಲವಾರು ಗಿಡಮರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ, ಮಾ.14 ರಂದು ಮಧ್ಯಾಹ್ನ ಸುಮಾರು 2 ಗಂಟೆಯ ಸುಮಾರಿಗೆ ಮತ್ತೆ ರಾಮತಿರ್ಥ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಒಂದು ಕಡೆ ಬೆಂಕಿ ನಂದಿಸಿದರೆ ಮತ್ತೊಂದು ಕಡೆ ಮತ್ತೆ ಬೆಂಕಿ ಹೊತ್ತಿ ಉರಿಯುವ ಘಟನೆ ನಡೆದಿದ್ದು, ಬೆಂಕಿ ಹಲವೆಡೆ ಪಸರಿಸಿತು.
ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಕೆಲವರು ಅರಣ್ಯ ಪ್ರದೇಶಕ್ಕೆ ಮದ್ಯಪಾನ ಮಾಡಲು ಬರುವವರಿಂದಲೇ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ದಿನಕ್ಕೆ ಕನಿಷ್ಠ ಎರಡು ಬಾರಿ ಗಸ್ತು ತಿರುಗಿದರೆ ಇಂತಹ ಘಟನೆಗಳನ್ನು ತಡೆಯಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭ ಉಪವಲಯ ಅರಣ್ಯಾಧಿಕಾರಿ ವಿನೋದ ಜೈನಾಪುರ, ಸಿಬ್ಬಂದಿಗಳಾದ ಪುಂಡಲಿಕ ಪೂಜಾರಿ, ಸುಭಾಷ ವಾರದ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎನ್.ಪಿ. ಹುಗಾರ, ಸಿಬ್ಬಂದಿಗಳಾದ ಅಶೋಕ ಹಳೆಗೌಡರ, ಆನಂದ ಹಣಬರಟ್ಟಿ, ಶ್ರೀಧರ ಮಾಳಶೆಟ್ಟಿ, ದಾನಯ್ಯ ಗಣಾಚಾರಿ, ಪರಶುರಾಮ ತೆರದಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆಯೇ ಅರಣ್ಯ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಸಂಭವ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಡಿನೊಳಗೆ ಕೆಲವರು ಮದ್ಯಪಾನ ಮಾಡಲು ಹೋಗುವುದು ಹಾಗೂ ನಿರ್ಲಕ್ಷ್ಯವಾಗಿ ಬೆಂಕಿ ಹಚ್ಚುವುದು ಅರಣ್ಯ ಅಗ್ನಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಾಡಿನೊಳಗೆ ಮದ್ಯಪಾನ ಮಾಡಲು ಹೋಗುವವರು ಅಲ್ಲಿ ಬೆಂಕಿ ಹಚ್ಚಿ ಅಡುಗೆ ಮಾಡುವುದು ಅಥವಾ ಬೀಡಿ-ಸಿಗರೇಟ್ ಸೇದುತ್ತಾ ಬೆಂಕಿಯ ಅವಶೇಷಗಳನ್ನು ಹಾಗೆಯೇ ಬಿಟ್ಟು ಹೋಗುವುದರಿಂದ ಅರಣ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುವ ಸಂಭವ ಹೆಚ್ಚಾಗಿದೆ. ಇದರಿಂದ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಗೂ ಕಾಡುಪ್ರಾಣಿಗಳಿಗೆ ಹಾನಿಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಮದ್ಯಪಾನ ಮಾಡಲು ಹೋಗುವವರ ಮೇಲೆ ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಕಾಡಿನ ಅಂಚು ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸುವುದು, ಎಚ್ಚರಿಕಾ ಫಲಕಗಳನ್ನು ಅಳವಡಿಸುವುದು ಹಾಗೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅಗತ್ಯವಾಗಿದೆ.
ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಹಾಗೂ ಜೀವ ವೈವಿಧ್ಯ ಕಾಪಾಡಲು ಸಾರ್ವಜನಿಕರು ಸಹ ಜಾಗೃತಿಯಿಂದ ವರ್ತಿಸಬೇಕಾಗಿದೆ. ಬೇಸಿಗೆ ಕಾಲದಲ್ಲಿ ಅರಣ್ಯ ಅಗ್ನಿ ತಡೆಯಲು ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ.



























