Home ಸುದ್ದಿ ರಾಷ್ಟ್ರೀಯ ತ್ವರಿತಗತಿಯಲ್ಲಿ ಹಲಸೂರು ಕೆರೆ ಅಭಿವೃದ್ಧಿ ಕಾಮಗಾರಿ

ತ್ವರಿತಗತಿಯಲ್ಲಿ ಹಲಸೂರು ಕೆರೆ ಅಭಿವೃದ್ಧಿ ಕಾಮಗಾರಿ

ಬೆಂಗಳೂರು,ಮಾ.15-ನಗರದ ಪ್ರಮುಖ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗಳು ಪ್ರಸ್ತುತ ವೇಗವಾಗಿ ನಡೆಯುತ್ತಿವೆ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.


ಕೆರೆಯಲ್ಲಿನ ನೀರಿನ ಸಂಗ್ರಹ ಸಾಮಥ್ರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸುಮಾರು 25 ವರ್ಷಗಳಿಂದ ಶೇಖರಣೆಯಾಗಿರುವ ಹೂಳನ್ನು ತೆರವುಗೊಳಿಸುವ (ಡಿಸಿಲ್ಟಿಂಗ್) ಕಾರ್ಯ ಕೈಗೊಳ್ಳಲಾಗಿದೆ. ಈ ಕಾರ್ಯದಿಂದ ಕೆರೆಯ ಆಳ ಹೆಚ್ಚಳವಾಗುವುದರೊಂದಿಗೆ ನೀರಿನ ಸಂಗ್ರಹಣೆಯ ಸಾಮಥ್ರ್ಯವೂ ಹೆಚ್ಚಲಿದೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಕೆರೆಯ ಸುತ್ತಮುತ್ತ ಬಂಡ್ ರಕ್ಷಣೆಯೊಂದಿಗೆ ಸಾರ್ವಜನಿಕರಿಗೆ ಸುಲಭವಾಗಿ ಸಂಚರಿಸಲು ಎರಡು ಹಂತದ ನಡಿಗೆ ಮಾರ್ಗ (ಟು ಲೆವಲ್ ವಾಕ್‍ವೇ) ನಿರ್ಮಾಣ ಮಾಡಲಾಗುತ್ತಿದೆ. ಇದು ವಾಯುವಿಹಾರಿಗಳಿಗೆ ಸುರಕ್ಷಿತವಾಗಿ ನಡೆದು ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಲಿದೆ.
ಇದಲ್ಲದೆ, ಕೆರೆಯ ದಡ ಭಾಗದಲ್ಲಿ ನಾಗರಿಕರ ಸುರಕ್ಷತೆಗೆ ಅಲಂಕಾರಿಕ ಗ್ರಿಲ್‍ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಕೆರೆಯ ಸೌಂದರ್ಯವೂ ಹೆಚ್ಚಲಿದೆ. ಕೆರೆಯ ಪ್ರದೇಶವನ್ನು ಸಮೀಪದ ಉದ್ಯಾನವನದೊಂದಿಗೆ ಸಂಪರ್ಕಿಸಲು ಸಂಪರ್ಕ ಸೇತುವೆ ನಿರ್ಮಾಣ ಮಾಡುವ ಕಾರ್ಯವೂ ನಡೆಯುತ್ತಿದೆ. ಹೊಸ ಕಲ್ಯಾಣಿ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗಿದೆ.


ಹಲಸೂರು ಕೆರೆಯಲ್ಲಿರುವ ಮೂರು ದ್ವೀಪಗಳು ದುಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮರುನಿರ್ಮಾಣ ಮಾಡುವ ಯೋಜನೆಯೂ ರೂಪಿಸಲಾಗಿದೆ. ಜೊತೆಗೆ ಕೆರೆಯ ಒಂದು ಭಾಗದಲ್ಲಿ ನೀರಿನ ಆಳ ಹೆಚ್ಚಳವಾದ ನಂತರ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (ಎನ್‍ಡಿಆರ್‍ಎಫ್) ಸಿಬ್ಬಂದಿಗಳಿಗೆ ತರಬೇತಿ ನಡೆಸಲು ಸಹ ಅನುಕೂಲವಾಗಲಿದೆ.
ಸಾರ್ವಜನಿಕರ ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಕೆರೆ ಬದಿಯಲ್ಲಿನ ಉದ್ಯಾನವನವನ್ನು ಅಭಿವೃದ್ಧಿಪಡಿಸಿ ವಿವಿಧ ಸಸಿಗಳನ್ನು ನೆಟ್ಟು ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ.


ಈ ಎಲ್ಲಾ ಕಾಮಗಾರಿಗಳ ಮೂಲಕ ಹಲಸೂರು ಕೆರೆಯ ಪರಿಸರ ಸಮತೋಲನವನ್ನು ಕಾಪಾಡುವ ಜೊತೆಗೆ ನಾಗರಿಕರಿಗೆ ಉತ್ತಮ ವಿಶ್ರಾಂತಿ ಮತ್ತು ಮನರಂಜನಾ ವಾತಾವರಣ ಒದಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಆಯುಕ್ತ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.