Home ಜಿಲ್ಲೆ ಮೈಸೂರು ಮಹಿಳಾ ಅಧಿಕಾರಿಗಳು, ಪೌರ ಸೇವಾ ಕಾರ್ಮಿಕರೇ ಗಣ್ಯರು

ಮಹಿಳಾ ಅಧಿಕಾರಿಗಳು, ಪೌರ ಸೇವಾ ಕಾರ್ಮಿಕರೇ ಗಣ್ಯರು

ಸಂಜೆವಾಣಿ ವಾರ್ತೆ
ತಿ.ನರಸೀಪುರ ಮಾ.15-
ಪೌರಸೇವಾ ಮಹಿಳಾ ನೌಕರರಿಗೆ ವಿವಿಧ ಕ್ರೀಡಾಕೂಟ ಆಯೋಜಿಸಿ, ವೇದಿಕೆಯಲ್ಲಿ ಮಹಿಳಾ ಅಧಿಕಾರಿಗಳು, ನೌಕರರನ್ನ ಹಾಗೂ ಹಿರಿಯ ಪೌರ ಕಾರ್ಮಿಕ ಮಹಿಳೆಯರನ್ನು ಕೂರಿಸುವ ಮೂಲಕ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಪುರಸಭೆಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಉದ್ಘಾಟಕರು, ವೇದಿಕೆ ಗಣ್ಯರೂ ಮಹಿಳೆಯರೇ ಆಗಿದ್ದರು. ಮಧ್ಯಾಹ್ನದವರೆಗೆ ನಡೆದಂತಹ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ, ಇನ್ನುಳಿದ ಪೌರಸೇವಾ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ತ್ಯಾಜ್ಯ ಸಂಗ್ರಹ ಕಾರ್ಯದಲ್ಲಿ ನಿತ್ಯವೂ ದುಡಿಯುತ್ತಿರುವ ಕಮಿನಿಟಿ ಮೊಬಲೈಸರ್ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಲಾಯಿತು.


ವಿಶೇಷ ಕಾರ್ಯಕ್ರಮದ ರೂವಾರಿ ಪುರಸಭಾ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್ ಮಾತನಾಡಿ, ಪ್ರಸ್ತುವ ಸಮಾಜದಲ್ಲಿ ಕುಟುಂಬ ನಿರ್ವಹಣೆ ಜೊತೆಗೆ ಹೊರಗೆ ದುಡಿಯುವ ಮೂಲಕ ಮಹಿಳೆಯರು ಸಮಾಜದಲ್ಲಿ ಸಬಲತೆಯನ್ನು ಸಾಧಿಸುತ್ತಿದ್ದಾರೆ. ತಾಳ್ಮೆ, ವ್ಯವಧಾನ ಪುರುಷರಿಗಿಂತಲೂ ಹೆಚ್ಚು ಇರುವುದರಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲೂ ಪೌರಸೇವಾ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ವಿನಯ ವಿವೇಕವನ್ನು ಕಲಿಸಬೇಕು ಎಂದು ತಿಳಿಸಿದರು.
ಪುರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಿ.ಪ್ರಕಾಶ್ ಮಾತನಾಡಿ, ಮಹಿಳೆಯರ ಆರೋಗ್ಯ ಎಂದರೆ ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಆರೋಗ್ಯವೂ ಅದರಲ್ಲಿ ಒಳಗೊಂಡಿದೆ. ಸರಿಯಾದ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಸಮರ್ಪಕ ವಿಶ್ರಾಂತಿ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ, ಇವುಗಳ ಮೂಲಕ ಮಹಿಳೆಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.


ಮಾಜಿ ಅಧ್ಯಕ್ಷ ಎನ್. ಸೋಮು, ಹಿರಿಯ ಆರೋಗ್ಯ ನಿರೀಕ್ಷಕಿ ಚಂಪಾಶ್ರೀ, ಕಂದಾಯ ಅಧಿಕಾರಿ ಕೆ.ಸಿ. ತ್ರಿವೇಣಿ, ಕಚೇರಿ ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟನಾಧಿಕಾರಿ ನಳಿನ, ಕಿರಿಯ ಅಭಿಯಂತರ ಸಿದ್ದಪ್ಪ, ಲೆಕ್ಕಾಧಿಕಾರಿ ವಿನಯ್, ಪ್ರಥಮ ದರ್ಜೆ ಸಹಾಯಕಿ ಜಯಲಕ್ಷ್ಮಮ್ಮ, ಆಶಾ, ನಂದಿನಿ, ಸರಸ್ವತಿ, ಗೀತಾ, ಜ್ಯೋತಿ, ರಾಮು,
ಹರೀಶ್, ಪೌರಕಾರ್ಮಿಕರಾದ ಸರೋಜಮ್ಮ, ಸರೋಜ, ಬಣ್ಣಮ್ಮ, ಶಿವಣ್ಣ, ಸೋಮ, ಮಹದೇವ್ ಹಾಗೂ ಸಿಬ್ಬಂದಿಗಳು ಇದ್ದರು.