Home ಮುಖಪುಟ ಸುದ್ದಿ ಒಡಿಶಾ ಶಾಸಕರಿಗೆ ಆಮಿಷ ದೂರು ದಾಖಲು

ಒಡಿಶಾ ಶಾಸಕರಿಗೆ ಆಮಿಷ ದೂರು ದಾಖಲು

ಬೆಂಗಳೂರು, ಮಾ. ೧೫- ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿಯಿಂದ ರಾಜ್ಯದಲ್ಲಿ ವಾಸ್ತವ್ಯ ಹೂಡಿರುವ ಒಡಿಶಾದ ಕಾಂಗ್ರೆಸ್ ಶಾಸಕರ ಖರೀದಿಗೆ ಒಡಿಶಾದ ಬಿಜೆಪಿ ಕಡೆಯಿಂದ ನಾಲ್ವರು ಬೆಂಗಳೂರಿಗೆ ಬಂದು ಒಡಿಶಾ ಶಾಸಕರಿಗೆ ಆಮಿಷವೊಡ್ಡುತ್ತಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದಲ್ಲಿ ಬೀಡು ಬಿಟ್ಟಿರುವ ೮ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಖಾಸಗಿ ರೆಸಾರ್ಟ್‌ನಲ್ಲಿ ಒಡಿಶಾ ಬಿಜೆಪಿಯ ನಾಲ್ವರು ಭೇಟಿ ಮಾಡಿ ಆಮಿಷವೊಡ್ಡುತ್ತಿದ್ದಾರೆ ಎಂದು ಒಡಿಶಾ ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಅಶೋಕ್‌ಕುಮಾರ್ ದಾಸ್ ಬಿಡದಿ ಪೊಲೀಸರಿಗೆ ಇಂದು ದೂರು ನೀಡಿದ್ದಾರೆ.


ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ತಂಗಿರುವ ೮ ಒಡಿಶಾದ ಕಾಂಗ್ರೆಸ್ ಶಾಸಕರ ಪೈಕಿ ಕೆಲವು ಕಾಂಗ್ರೆಸ್ ಶಾಸಕರನ್ನು ಬೀರೇಂದ್ರಪ್ರಸಾದ್, ಸುರೇಶ್, ಅಜಿತ್‌ಕುಮಾರ್ ಸಾಹು, ಸೀಮಾಚಲ್ ಮಹಾಕೂಟ್ ಇವರುಗಳು ಭೇಟಿ ಮಾಡಿ ೫ ಕೋಟಿ ರೂ.ಗಳ ಆಮಿಷವೊಡ್ಡಿ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡುವಂತೆ ಕೋರಿದ್ದು, ನಮ್ಮ ಶಾಸಕರುಗಳು ಇದನ್ನು ತಿರಸ್ಕರಿಸಿದಾಗ ಈ ನಾಲ್ವರು ನೀವು ಒಡಿಶಾಗೆ ಬನ್ನಿ, ನಿಮ್ಮನ್ನು ಕೊಲೆ ಮಾಡುತ್ತೇವೆ ಎಂಬ ಬೆದರಿಕೆಯನ್ನು ಹಾಕಿ, ಕೆಟ್ಟದಾಗಿ ನಿಂದಿಸಿದ್ದಾರೆ. ಈ ನಾಲ್ವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್‌ಕುಮಾರ್ ದಾಸ್ ದೂರಿನಲ್ಲಿ ಮನವಿ ಮಾಡಿದ್ದಾರೆ.


ಖಾಲಿ ಚೆಕ್ ಪೋಟೋ ಬಿಡುಗಡೆ


ಒಡಿಶಾದ ಶಾಸಕರನ್ನು ಆಪರೇಷನ್ ಕಮಲಕ್ಕೆ ಒಪ್ಪಿಸಲು ವಂಡರ್‌ಲಾಗೆ ಬಂದು ಒಡಿಶಾ ಬಿಜೆಪಿಯ ಕೆಲವರು ಪ್ರಯತ್ನ ನಡೆಸಿರುವ ಬಗ್ಗೆ ಇಬ್ಬರು ವ್ಯಕ್ತಿಗಳ ಪೊಟೋ ಮತ್ತು ಖಾಲಿ ಚೆಕ್‌ಗಳನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.


ಡಿಕೆಶಿ ಹೇಳಿಕೆ


ಬಿಡದಿಯ ಖಾಸಗಿ ರೆಸಾರ್ಟ್‌ನಲ್ಲಿರುವ ಒಡಿಶಾದ ಕೆಲ ಕಾಂಗ್ರೆಸ್ ಶಾಸಕರನ್ನು ಒಡಿಶಾ ಬಿಜೆಪಿ ಕಡೆಯವರು ಭೇಟಿ ಮಾಡಿ ೫ ಕೋಟಿ ರೂ. ಆಮಿಷವೊಡ್ಡಿರುವುದನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಖಚಿತಪಡಿಸಿದ್ದು, ಈ ನಾಲ್ವರ ಪೈಕಿ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೇವೆ. ಮುಂದಿನ ಕಾನೂನು ಕ್ರಮಗಳನ್ನು ಪೊಲೀಸರು ಕೈಗೊಳ್ಳುತ್ತಾರೆ ಎಂದು ಹೇಳಿದರು.


ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಒಡಿಶಾದ ನಾಲ್ವರು ಕಾಂಗ್ರೆಸ್ ಶಾಸಕರು ತಂಗಿರುವ ರೆಸಾರ್ಟ್‌ನಲ್ಲೇ ರೂಂ ಬಾಡಿಗೆಗೆ ಪಡೆದು ರೆಸಾರ್ಟ್‌ಗೆ ಬಂದು ಒಡಿಶಾದ ಕಾಂಗ್ರೆಸ್ ಶಾಸಕರಿಗೆ ೫ ಕೋಟಿ ರೂ. ಆಮಿಷವೊಡ್ಡುತ್ತಿರುವ ಬಗ್ಗೆ ನಮಗೆ ಮಾಹಿತಿ ಬಂದಿತು. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದೆ. ಖಾಲಿ ಚೆಕ್‌ಗಳು ಸಿಕ್ಕಿವೆ. ಆಮಿಷವೊಡ್ಡಿದ ನಾಲ್ವರ ಪೈಕಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಹೇಳಿದರು.ಇದನ್ನು ಎಐಸಿಸಿ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ ಎಂದು ಅವರು ತಿಳಿಸಿದರು.


ಗೊಂದಲ ಇಲ್ಲ


ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಇದೆಯೇ ಎಂಬ ಪ್ರಶ್ನೆಗೆ ಯಾವ ಗೊಂದಲವೂ ಇಲ್ಲ. ನಾವು ಚುನಾವಣೆಗೆ ಸಿದ್ದರಿದ್ದೇವೆ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಅವರು ಹೇಳಿದರು.