
ಯಾದಗಿರಿ:ಮಾ.೧೫: ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆಗಳು ಅಡಗಿಕೊಂಡಿದ್ದರೂ, ಸೂಕ್ತ ಅವಕಾಶಗಳ ಕೊರತೆಯಿಂದ ಅವು ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಯುವಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅಭಿಪ್ರಾಯಪಟ್ಟರು.
ಜಿಲ್ಲೆಯ ವಡಗೆರಾ ತಾಲೂಕಿನ ಗೋನಾಲ ಗ್ರಾಮದಲ್ಲಿ ಯುವಕರು ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಯುವಕರಲ್ಲಿ ಅಪಾರ ಸಾಮರ್ಥ್ಯವಿದ್ದು, ಸರಿಯಾದ ಮಾರ್ಗದರ್ಶನ ಮತ್ತು ಸೌಲಭ್ಯಗಳು ದೊರೆತರೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಕ್ರೀಡೆಗಳು ಯುವಕರಲ್ಲಿ ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಪ್ರಮುಖ ಸಾಧನವಾಗಿವೆ. ಇವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಹಳ್ಳಿಗಳಲ್ಲಿ ಕ್ರೀಡಾಂಗಣಗಳ ಕೊರತೆ ಹಾಗೂ ತರಬೇತಿ ಸೌಲಭ್ಯಗಳ ಅಭಾವದಿಂದ ಅನೇಕ ಪ್ರತಿಭೆಗಳು ಮುಂದೆ ಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅವರು ಉಲ್ಲೇಖಿಸಿದರು.
ಗ್ರಾಮೀಣ ಮಟ್ಟದಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದು ಯುವಕರಲ್ಲಿ ಒಗ್ಗಟ್ಟು ಹೆಚ್ಚಿಸುವುದರ ಜೊತೆಗೆ ಕ್ರೀಡೆಗಳ ಬಗ್ಗೆ ಆಸಕ್ತಿ ಮೂಡಿಸಲು ಸಹಕಾರಿಯಾಗುತ್ತದೆ. ಗೋನಾಲ ಗ್ರಾಮದ ಯುವಕರು ಸ್ವಯಂಪ್ರೇರಿತವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ಯುವಕರು ಕ್ರೀಡೆಗಳ ಜೊತೆಗೆ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಬೇಕು. ಸೋಲು ಮತ್ತು ಗೆಲುವು ಕ್ರೀಡೆಯ ಭಾಗವಾಗಿದ್ದು, ಕ್ರೀಡಾಸ್ಫೂರ್ತಿಯಿಂದ ಆಟವಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಮುಖಂಡರಾದ ಶಂಕರಪ್ಪ ಗೌಡ ಮಾಲಿ ಪಾಟೀಲ್, ಶ್ರೀಧರ್ ಸಾಹುಕಾರ, ಸಂದೀಪ್ ಪಾಟೀಲ್, ಮಹದೇವಪ್ಪ ಪೂಜಾರಿ, ಮರಿಸ್ವಾಮಿ ಪೂಜಾರಿ, ನಾಗಪ್ಪ ಪೂಜಾರಿ, ಡಾ. ಮಂಜು, ಮಂಜುನಾಥ್, ರಾಜಪ್ಪ ಸಾಹುಕಾರ್, ಸೂಗಪ್ಪ ಗೌಡ ಕೊಂಗAಡಿ, ಸಿದ್ದಯ್ಯ ಮುತ್ಯಾ, ರಾಚಪ್ಪ ಗೌಡ, ಮಹಮ್ಮದ್ ಗುಂಡ್ಲೂರು, ವಿಶ್ವನಾಥ್ ಬೆಂಡ್ಡೆಬೆAಬಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



























