
ಕಲಬುರಗಿ,ಫೆ.28:ಮರಾಠಿ ರಂಗಭೂಮಿಯ ಖ್ಯಾತ ನಾಟಕಕಾರ ಜಯವಂತ ದಳವಿ ಅವರು ರಚಿಸಿದ ಎಚ್.ಕೆ.ಕರ್ಕೇರ ಅವರು ಕನ್ನಡಕ್ಕೆ ಅನುವಾದಿಸಿದ ಮತ್ತು ಹುಲುಗಪ್ಪ ಕಟ್ಟಿಮನಿ ನಿರ್ದೇಶನದ ಕಾಲಚಕ್ರ ನಾಟಕವು ಕಲಬುರಗಿ ನಾಟಕೋತ್ಸವ ಅಂಗವಾಗಿ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಪ್ರದರ್ಶನವಾಗಿದ್ದು, ವೃದ್ಧರ ಸಂಧ್ಯಾಕಾಲದ ಕಷ್ಟದ ಬದುಕು ಅನಾವರಣಗೊಳ್ಳುವ ಮೂಲಕ ಮನೆ-ಮನೆಯ ಕಥೆಯನ್ನು ಪ್ರತಿಬಿಂಬಿಸಿತು.
ವೃದ್ಧ ದಂಪತಿಗಳು ಹಾಗೂ ಅವರ ಇಬ್ಬರ ಗಂಡು ಮಕ್ಕಳು. ಕಾಯಿಲೆಯಿಂದ ನರಳುತ್ತಿರುವ ತಾಯಿ, ತಂದೆಯರನ್ನ ಮಕ್ಕಳು ನಿರ್ಲಕ್ಷಿಸುತ್ತಾರೆ. ಇದನ್ನರಿತ ವೃದ್ಧ ತಂದೆ ಪತ್ರಿಕೆಯಲ್ಲಿ ಒಂದು ಪ್ರಕಟಣೆ ಕೊಡುತ್ತಾನೆ. ಯಾರಿಗೆ ಮಕ್ಕಳಿಲ್ಲವೊ ಅಂತವರು ಮಕ್ಕಳನ್ನು ದತ್ತು ತೆಗೆದು ಕೊಳ್ಳುತ್ತಾರೆ. ಹಾಗೆಯೇ ಯಾರಿಗೆ ತಂದೆ-ತಾಯಿ ಇಲ್ಲವೊ ಅಥವಾ ಅಜ್ಜ-ಅಜ್ಜಿ ಇಲ್ಲವೊ ಅಂತವರು ಯಾಕೆ ಈ ಮುದುಕರನ್ನು ದತ್ತು ತೆಗೆದುಕೊಳ್ಳಬಾರದು ? ಇಚ್ಚಿಸುವುದಾದರೆ. 70-75 ವಯಸ್ಸಿನ ಇಬ್ಬರು ವೃದ್ಧ ದಂಪತಿಗಳಿದ್ದಾರೆ. ಅವರನ್ನು ಕರೆದು ಕೊಂಡು ಹೋಗಿ ಎಂದು ಪತ್ರಿಕೆಯಲ್ಲಿ ಜಾಹೀರಾತು ಕೊಡುತ್ತಾರೆ. ಇದನ್ನರಿತ ಮಕ್ಕಳಿಬ್ಬರು ವಯಸ್ಸಾದ ತಮ್ಮ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಇದೇ ಹೊತ್ತಿಗೆ ಜಾಹೀರಾತು ಪ್ರಕಟಣೆಯನ್ನು ಓದಿದ ಒಬ್ಬ ಯುವಕ ವೃದ್ದರನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಹೋಗುವ ಮುನ್ನ ಮುದುಕ ತಂದೆ ತನ್ನ ಮಕ್ಕಳಿಗೆ ಹೇಳುತ್ತಾನೆ ನಿನ್ನೆ ನೀವು ನಮ್ಮ ಮೇಲೆ ಅವಲಂಬಿತರಾಗಿದ್ರಿ, ಇಂದು ನಾವು ನಿಮ್ಮ ಮೇಲೆ ಅವಲಂಬಿತರಾಗಿದ್ದೇವೆ ಇದು ಒಂದು ಕಾಲಚಕ್ರ ಎಂದು ಹೇಳುವ ಮನಕಲಕುವ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿದವು.
ಕಾಲಚಕ್ರ ನಾಟಕವು ಮನೆ ಮನೆಯ ಕಥೆಯಾಗಿದೆ. ಸರ್ವಕಾಲಕ್ಕೂ ಸಲ್ಲುವ ನಾಟಕವಾಗಿದೆ. ಆರ್ಥಿಕ ಅಸುರಕ್ಷತೆ, ಮಕ್ಕಳ ಮೇಲಿನ ಅವಲಂಬನೆ, ಭವಿಷ್ಯದ ಮೇಲಿನ ಅನಿಶ್ಚಿತತೆಗಳು, ಕುಟುಂಬ ಸದಸ್ಯರ ನಿರ್ಲಕ್ಷ್ಯ ಸಾಮಾಜಿಕ ಸಂಪರ್ಕಗಳ ಕೊರತೆಯಿಂದ ಒಂಟಿತನದ ವೇದನೆ ಇವು ಎಲ್ಲವನ್ನು ಒಳಗೊಂಡ ನಾಟಕವೆ ಕಾಲಚಕ್ರವಾಗಿದೆ. ನಾಟಕದಲ್ಲಿ ವೃದ್ಧಾಪ್ಯದ ಸೂಕ್ಷ್ಮ ಸಂವೇದನೆಗಳು ಬಹಳ ಸೊಗಸಾಗಿ ಮೂಡಿಬಂದಿದೆ. ಕಲಬುರಗಿ ರಂಗಾಯಣ ರೆಪರ್ಟರಿ ಕಲಾವಿದರು ಅಷ್ಟೇ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಒಟ್ಟಾರೆ ನಾಟಕ ಪ್ರೇಕ್ಷಕರ ಮನಕಲಕಿತ್ತು.
ಶಾಸಕ ಎಂ.ವೈ.ಪಾಟೀಲ, ಕಲಬುರಗಿ ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ, ಆಡಳಿತಾಧಿಕಾರಿ ಸಿದ್ರಾಮ ಶಿಂಧೆ ಸೇರಿದಂತೆ ಹಲವರು ನಾಟಕ ವೀಕ್ಷಿಸಿದರು.
ಇಂದು ಸಂಜೆ ಇದೇ ರಂಗಮಂಚದಲ್ಲಿ ಲಕ್ಷ್ಮಣ್ ಕೆ.ಪಿ. ನಿರ್ದೇಶನದ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ಪ್ರದರ್ಶನವಾಗಲಿದೆ


























