Home ಜಿಲ್ಲೆ ರಾಜ್ಯ ಬಜೆಟ್‍ನಲ್ಲಿ ಅನುದಾನ ಘೋಷಿಸಿ

ರಾಜ್ಯ ಬಜೆಟ್‍ನಲ್ಲಿ ಅನುದಾನ ಘೋಷಿಸಿ

ಬೀದರ:ಫೆ.27: 1995 ರ ನಂತರ ಪ್ರಾರಂಭವಾದ ಖಾಸಗಿ ಶಾಲಾ, ಕಾಲೇಜುಗಳಿಗೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಅನುದಾನ ಘೋಷಿಸಬೇಕು ಎಂದು ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ಹಾಗೂ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಲೋನಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಹತ್ತು ಹಲವು ಸಮಸ್ಯೆಗಳ ಮಧ್ಯೆಯೂ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿವೆ. ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎನ್ನುವುದು ಸಂಘದ ಬಹು ದಿನಗಳ ಬೇಡಿಕೆಯಾಗಿದೆ. ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಸಂಘದ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಸಂಘದ ಪದಾಧಿಕಾರಿಗಳು ಸಚಿವರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೋಳಿ, ಎಚ್.ಕೆ. ಪಾಟೀಲ ಹಾಗೂ ಎಚ್.ಸಿ. ಮಹಾದೇವಪ್ಪ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ. ಮೌಲಾನಿ, ಎನ್.ಡಿ. ನದಾಫ್, ಕಾರ್ಯದರ್ಶಿ ಗುರುನಾಥ ರೆಡ್ಡಿ, ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗೇರಿ, ಗುಂಡಯ್ಯ ತೀರ್ಥ, ಕಿರಣಕುಮಾರ ಗುರವ್, ರಾಮಮೋಹನ್, ಮಹೇಶ್, ಮೂರ್ಷಿ ಮತ್ತಿತರರು ಇದ್ದರು.