Home ಜಿಲ್ಲೆ ಬೆಂಗಳೂರು ಅನುದಾನ ವಾಪಸ್ ತಪ್ಪಿಸಲು ಒಮ್ಮತದ ನಿರ್ಧಾರ ಖಾತೆ ವಿಳಂಬಕ್ಕೆ ಸದಸ್ಯರ ಆಕ್ರೋಶ

ಅನುದಾನ ವಾಪಸ್ ತಪ್ಪಿಸಲು ಒಮ್ಮತದ ನಿರ್ಧಾರ ಖಾತೆ ವಿಳಂಬಕ್ಕೆ ಸದಸ್ಯರ ಆಕ್ರೋಶ

ವಿಜಯಪುರ.ಫೆ೨೨: ಕಳೆದ ನಾಲ್ಕು ವರ್ಷಗಳಿಂದ ಪುರಸಭೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಎರಡು ಕೋಟಿ ರೂಪಾಯಿ ಅನುದಾನವು ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗುವುದನ್ನು ತಡೆಯಲು, ಆ ಹಣವನ್ನು ಪಟ್ಟಣದ ಎಲ್ಲಾ ೨೩ ವಾರ್ಡ್‌ಗಳ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲು ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.


ಪುರಸಭಾ ಅಧ್ಯಕ್ಷೆ ಭವ್ಯ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಸದಸ್ಯರ ತೀವ್ರ ಒತ್ತಾಯದ ಮೇರೆಗೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಕಟ್ಟಡದ ಹಣ ವಾರ್ಡ್‌ಗಳ ಪಾಲಿಗೆ;ಪುರಸಭೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ೪ ವರ್ಷಗಳ ಹಿಂದೆಯೇ ೨ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭವಾಗಿರಲಿಲ್ಲ. ಮಾರ್ಚ್ ೩೧ರೊಳಗೆ ಈ ಹಣ ಬಳಕೆ ಮಾಡದಿದ್ದರೆ ಅನುದಾನ ಕೈಬಿಟ್ಟು ಹೋಗುವ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ ಎಂ. ಸತೀಶ್ ಕುಮಾರ್ ಮಾತನಾಡಿ, “ಪಟ್ಟಣದ ೨೩ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳು ಬಾಕಿ ಇವೆ. ಹೀಗಾಗಿ ಈ ಹಣವನ್ನು ಎಲ್ಲಾ ವಾರ್ಡ್‌ಗಳಿಗೆ ಸಮಾನವಾಗಿ ಹಂಚಿ ತುರ್ತು ಕೆಲಸಗಳನ್ನು ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ನಂದಕುಮಾರ್ ಹಾಗೂ ರಾಜಣ್ಣ ಧ್ವನಿಗೂಡಿಸಿದರು. ಬಯಪಾ ವತಿಯಿಂದ ನೂತನ ಕಟ್ಟಡಕ್ಕೆ ೬ ಕೋಟಿ ರೂ. ಅನುದಾನ ಬರುವ ನಿರೀಕ್ಷೆ ಇರುವುದರಿಂದ, ಸದ್ಯದ ಹಣವನ್ನು ವಾರ್ಡ್‌ಗಳಿಗೆ ಬಳಸಲು ಸಭೆ ಒಪ್ಪಿಗೆ ನೀಡಿತು.


ಖಾತೆ ವಿಳಂಬ: ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ;
ಸಭೆಯಲ್ಲಿ ಸಾರ್ವಜನಿಕರ ಇ-ಖಾತೆ ವಿಳಂಬದ ಬಗ್ಗೆ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.


ಎಂ. ಸತೀಶ್ ಕುಮಾರ್: “ತಿಂಗಳುಗಟ್ಟಲೆ ಅಲೆದರೂ ಖಾತೆ ಆಗುತ್ತಿಲ್ಲ. ಸರ್ಕಾರಿ ಮಟ್ಟದಲ್ಲಿ ಸಮಸ್ಯೆಯಿದ್ದರೆ ರೆಸಲ್ಯೂಷನ್ ಮಾಡಿ ಅಧಿಕೃತವಾಗಿ ಎಂಡಾರ್ಸ್‌ಮೆಂಟ್ ನೀಡಿ,” ಎಂದು ಆಗ್ರಹಿಸಿದರು.


ನಂದಕುಮಾರ್: “ಆನ್‌ಲೈನ್‌ನಲ್ಲಿ ಕಂದಾಯ ಪಾವತಿಸಿದರೂ ಪುರಸಭೆ ದಾಖಲೆಗಳಲ್ಲಿ ಅಪ್‌ಡೇಟ್ ಆಗುತ್ತಿಲ್ಲ,” ಎಂದು ದೂರಿದರು.


ಬೈರೇಗೌಡ: “ವಿಭಾಗ ಪತ್ರ ಹಾಗೂ ಪತಿ ಖಾತೆಗಳು ವರ್ಷಗಳಾದರೂ ಆಗುತ್ತಿಲ್ಲ,” ಎಂದು ಆಕ್ಷೇಪಿಸಿದರು.


ವಿಮಲಾ ಬಸವರಾಜು: “ಸ್ವಂತ ಕಟ್ಟಡವಿಲ್ಲದೆ ಸದಸ್ಯರಿಗೆ ಗೌರವ ಸಿಗುತ್ತಿಲ್ಲ. ಕಟ್ಟಡದ ಹಣ ಬಳಕೆ ಮಾಡದ ಅಧಿಕಾರಿಗಳ ಬೇಜವಾಬ್ದಾರಿಗೆ ಹೊಣೆ ಯಾರು?” ಎಂದು ಪ್ರಶ್ನಿಸಿದರು.


ಗುತ್ತಿಗೆದಾರರಿಗೆ ಕಪ್ಪುಪಟ್ಟಿ ಎಚ್ಚರಿಕೆ;ಟೆಂಡರ್ ಆಗಿದ್ದರೂ ಕೆಲಸ ಆರಂಭಿಸದ ಗುತ್ತಿಗೆದಾರರ ವಿರುದ್ಧ ಸದಸ್ಯ ಹನಿಫುಲ್ಲಾ ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸತ್ಯನಾರಾಯಣ, “ಕೆಲಸ ಮಾಡದ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರನ್ನು ಕಪ್ಪುಪಟ್ಟಿಗೆ (ಃಟಚಿಛಿಞಟisಣ) ಸೇರಿಸಲಾಗುವುದು,” ಎಂದು ತಿಳಿಸಿದರು.


ಇದೇ ವೇಳೆ ಇಂಜಿನಿಯರ್ ಶೇಖರ್ ರೆಡ್ಡಿ ಅವರು ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್‌ಗೆ ಹಣ ಬಳಸಲು ನೀಡಿದ ಸಲಹೆಯನ್ನು ಸದಸ್ಯರು ತಿರಸ್ಕರಿಸಿದರು.
ಸಚಿವರ ಬಳಿಗೆ ನಿಯೋಗ;ಪಟ್ಟಣದ ಕುಡಿಯುವ ನೀರು, ಒಳಚರಂಡಿ ಹಾಗೂ ಬೀದಿ ದೀಪಗಳ ಶಾಶ್ವತ ಪರಿಹಾರಕ್ಕಾಗಿ ಎಲ್ಲಾ ಪಕ್ಷಗಳ ಸದಸ್ಯರು ಒಟ್ಟಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗ ಹೋಗಲು ತೀರ್ಮಾನಿಸಲಾಯಿತು.


ಸಭೆಯಲ್ಲಿ ಉಪಾಧ್ಯಕ್ಷೆ ತಾಜುನ್ನಿಸ ಮಹಬೂಬ್ ಪಾಷಾ, ಸದಸ್ಯರಾದ ರಾಜೇಶ್ವರಿ ಭಾಸ್ಕರ್, ಮಂಜುಳಾ ಮುನಿರಾಜು, ಕವಿತಾ ಮುನಿಅಂಜನಪ್ಪ,ಆಯೆಷಾ, ಸಿ. ನಾರಾಯಣಸ್ವಾಮಿ, ಎಂ. ನಾರಾಯಣಸ್ವಾಮಿ, ರವಿ, ಇಕ್ಬಾಲ್, ಕೇಶವಪ್ಪ, ಶಿಲ್ಪಾ ಅಜಿತ್, ಶ್ರೀರಾಮ್ ಹಾಗೂ ಪುರಸಭೆ ಕಂದಾಯ ವಿಭಾಗದ ಶಿವನಾಗೇಗೌಡ, ರೂಪಾಮಣಿ,ಮಮತ,ಶ್ರೀನಿವಾಸ್,ಜಿ.ಜನಾರ್ಧನ್, ಹೇಮ, ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.