Home ಮುಖಪುಟ ಸುದ್ದಿ ವಿದೇಶಕ್ಕೆ ಹಾರಿದ ಕೈ ಶಾಸಕರು

ವಿದೇಶಕ್ಕೆ ಹಾರಿದ ಕೈ ಶಾಸಕರು

ಬೆಂಗಳೂರು, ಫೆ. ೧೮- ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ವಿಚಾರ ಬೂದಿಮುಚ್ಚಿದ ಕೆಂಡದಂತಿರುವಾಗಲೇ ರಾಜ್ಯದ ೧೧ ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.


ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಕಾಂಗ್ರೆಸ್‌ನಲ್ಲೇ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೈ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದೇವೆ ಎಂದು ಸಮರ್ಥನೆ ನೀಡಿ, ವಿದೇಶಕ್ಕೆ ತೆರಳಿದ್ದಾರೆ.


ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿನ್ನೆ ೧೧ ಶಾಸಕರು ವಿದೇಶ ಪ್ರವಾಸಕ್ಕೆ ತೆರಳಿದ್ದು ,ಇಂದು ರಾತ್ರಿ ಸುಮಾರು ೧೦ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವರು.


ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದಿರುವಾಗಲೇಕಾಂಗ್ರೆಸ್ ಶಾಸಕರ ಈ ವಿದೇಶ ಪ್ರವಾಸ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.


ಶಾಸಕರು ಕುಟುಂಬ ಸಮೇತರಾಗಿ ವಿದೇಶ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸದ ಹಿಂದಿರುವ ರಾಜಕೀಯ ಲೆಕ್ಕಾಚಾರ ಏನೆಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.


ಶಾಸಕರು ಸ್ವಂತ ಖರ್ಚಿನಲ್ಲಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದು ಹೇಳಿದರೂ ಈ ಪ್ರವಾಸವನ್ನು ಆಯೋಜನೆ ಮಾಡಲಾಗಿದೆ ಎಂಬ ಮಾತುಗಳುಕೇಳಿ ಬರುತ್ತಿವೆ.


ಹೈಕಮಾಂಡ್ ಕೂಡಾ ಶಾಸಕರ ವಿದೇಶ ಪ್ರವಾಸಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಇದಾದ ಬಳಿಕ ಕೆಲ ಶಾಸಕರು ಪ್ರವಾಸದಿಂದ ಹಿಂದೆ ಸರಿದಿದ್ದರು. ನಿನ್ನೆ ಶಾಸಕರಾದ ಪುಟ್ಟರಂಗಶೆಟ್ಟಿ, ಹೆಚ್.ಡಿ. ತಮ್ಮಯ್ಯ, ಹಂಪನಗೌಡ ಬಾದರ್ಲಿ ದೇವೇಂದ್ರಪ್ಪ, ಬಿ.ಎಂ.ನಾಗರಾಜು, ವಿಧಾನಪರಿಷತ್ ಸದಸ್ಯರಾದ ವಸಂತ್‌ಕುಮಾರ್, ಡಿ.ತಿಮ್ಮಯ್ಯ, ಶರಣಗೌಡ ಬೈಯಾಪುರ ಇವರುಗಳ ವಿದೇಶಕ್ಕೆ ತೆರಳಿದ್ದು, ಇಂದು ರಾತ್ರಿ ಸಹ ಸುಮಾರು ೧೦ ಶಾಸಕರು ವಿದೇಶಕ್ಕೆ ತೆರಳುವರು ಎಂದು ಹೇಳಲಾಗಿದೆ.


ವಿದೇಶಕ್ಕೆ ತೆರಳಿರುವ ಶಾಸಕರು ಸಿದ್ಧರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರಾಗಿರುವುದು ಗಮನಾರ್ಹ.


ವಿದೇಶ ಪ್ರವಾಸಕ್ಕೆತೆರಳಿರುವ ಕೈ ಶಾಸಕರು ನಾವು ವೈಯುಕ್ತಿಕ ಪ್ರವಾಸ ಕೈಗೊಂಡಿದ್ದೇವೆ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇವೆ. ರಾಜಕೀಯ ಕಾರಣಕ್ಕಾಗಿ ಪ್ರವಾಸ ಮಾಡುತ್ತಿಲ್ಲ. ನಮ್ಮಲ್ಲಿ ಬಣ ಇಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರೂ ನಮ್ಮ ಕಣ್ಣುಗಳಿದ್ದಂತೆ. ನಮ್ಮ ಪ್ರವಾಸಕ್ಕೆ ಹೈಕಮಾಂಡ್ ಒಪ್ಪಿಗೆ ಇದೆ ಎಂದು ಹೇಳಿರುವುದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.