Home ಜಿಲ್ಲೆ ಬೆಂಗಳೂರು ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಹಿಮ ಪಟೇಲ್ ಚಾಲನೆ

ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಹಿಮ ಪಟೇಲ್ ಚಾಲನೆ

ಕೋಲಾರ, ೪-ರಾಜ್ಯದಾದ್ಯಂತ ಪ್ರವಾಸ ಮಾಡಿ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಜೆಡಿಯು ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗುವುದು ೫೦ ಸಾವಿರ ಸದಸ್ಯತ್ವ ಮಾಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ನಮ್ಮದೇ ಅಥವಾ ಬೆಂಬಲಿತ ಸರ್ಕಾರ ರಚಿಸುವ ಮಹಾ ಆಕಾಂಕ್ಷೆ ಇದೆ ಎಂದು ಜೆಡಿಯು ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮ ಜೆ.ಪಟೇಲ್ ತಿಳಿಸಿದರು.


ತಾಲ್ಲೂಕಿನ ಕಲ್ಲಂಡೂರಿನಲ್ಲಿ ನಡೆದ ಜನತಾದಳ (ಸಂಯುಕ್ತ) ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪಕ್ಷಕ್ಕೆ ಸೇರಲು ಜನರೇ ಮುಂದೆ ಬಂದು ಅರ್ಜಿ ಹಾಕುವ ರೀತಿ ಪಕ್ಷ ಕಟ್ಟಬೇಕು. ಸಿದ್ಧಾಂತದ ಆಧಾರದ ಮೇಲೆ ಹಾಗೂ ಜನರು ನಮ್ಮ ಪಕ್ಷದತ್ತ ವಾಲುವಂಥ ರೀತಿಯಲ್ಲಿ ಪಕ್ಷ ಕಟ್ಟಬೇಕು.ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.


ಈಗಿನ ರಾಜಕಾರಣ ಎಂದರೆ ಹಳಿ ತಪ್ಪಿದ ರೈಲು ಇದ್ದಂತೆ. ನಾವೆಲ್ಲಾ ಆ ರೈಲು ಹತ್ತಿದ್ದೇವೆ, ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂದರೆ ಪರಸ್ಪರ ಬೈಯ್ದುಕೊಳ್ಳುವುದೇ ಆಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜೆಡಿಯು ಪಕ್ಷದಿಂದ ಮಾಡಬೇಕಿದೆ. ಪಾಪದ ದಿಕ್ಕಿಗೆ ಹೋಗದೆ ಜನರಿಗೆ ಒಳ್ಳೆಯದನ್ನು ಮಾಡುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ನುಡಿದರು.


ಈಗ ಬರೀ ಪ್ರತಿಕ್ರಿಯಾತ್ಮಕ ಆಲೋಚನೆ ನಡೆಯುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಯಾವುದೋ ಘಟನೆಗೆ ನಾವು ಪ್ರತಿಕ್ರಿಯಿಸುತ್ತಿದ್ದೇವೆ. ಪರಸ್ಪರ ದೋಷಣೆಗಿಂತ ನಾವು ರಾಜ್ಯಕ್ಕೆ ಏನು ಕೊಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ ಸಾವಯವ ಕೃಷಿ ಹಾಗೂ ಪರಿಸರದ ಬಗ್ಗೆ ಚಿಂತಿಸಬೇಕಿದೆ. ಪ್ರಕೃತಿ ಕಡೆ ಗಮನ ಹರಿಸಬೇಕಿದೆ. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಹಾಗೂ ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ಲಂಡೂರು ಡಾ.ನಾಗರಾಜ್ ಮಾತನಾಡಿ, ಸದಸ್ಯತ್ವ ನೋಂದಣಿ ಅಭಿಯಾನ ರಾಷ್ಟ್ರದಾದ್ಯಂತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಮಹಿಮ ಪಟೇಲ್ ನೇತೃತ್ವದಲ್ಲಿ ಆರಂಭಿಸಲಾಗಿದೆ ಮಹಿಳೆಯರು ಹಾಗೂ ಯುವಕರಿಗೆ ಪಕ್ಷದ ಸಿದ್ಧಾಂತ ತಿಳಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು.

ಭ್ರಷ್ಟಾಚಾರ ರಹಿತ ಆಡಳಿತದ ಗುರಿ ನಮ್ಮದು. ಸರ್ವೋದಯದ ಧ್ಯೇಯಗಳಾದ ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಪರಿಸರ ಜನರಿಗೆ ಬೇಕು. ವಾಯುಮಾಲಿನ್ಯದ ಕಾರಣ ಶ್ವಾಸಕೋಶದ ಕಾಯಿಲೆ ಬರುತ್ತಿದೆ. ಮುಂದಿನ ಪೀಳಿಗೆ ಈ ಸಮಸ್ಯೆಗೆ ಒಳಗಾಗಬಾರದು. ರಾಸಾಯನಿಕ ಹಾಕಿ ಬೆಳೆದ ತರಕಾರಿಯಿಂದ ವಿವಿಧ ರೋಗ ಬರುತ್ತಿವೆ. ಹೀಗಾಗಿ, ಸಾವಯವ ಕೃಷಿಗೆ ಒತ್ತು ನೀಡಬೇಕಿದೆ. ಈ ಐದು ಅಂಶ ಇಟ್ಟುಕೊಂಡು ರಾಜ್ಯದಲ್ಲಿ ಜೆಡಿಯು ಪಕ್ಷ ಪುನಶ್ಚೇತನಗೊಳಿಸುವ ಕೆಲಸ ನಡೆಯುತ್ತಿದೆ. ಪಕ್ಷವನ್ನು ಎಲ್ಲಾ ವರ್ಗದವರು ಸೇರಿ ಕಟ್ಟಲು ಸಂಕಲ್ಪ ಮಾಡಲಾಗಿದೆ. ಸದಸ್ಯರಾಗಿ ಪಕ್ಷಕ್ಕೆ ದುಡಿಯಬೇಕಿದೆ ಎಂದು ಹೇಳಿದರು.