Home ಜಿಲ್ಲೆ ಕಲಬುರಗಿ ಬಂಜಾರ ಜನಾಂಗದ ಸಂಸ್ಕøತಿ ಕಥನ : ಡಿ.ಬಿ.ನಾಯಕ

ಬಂಜಾರ ಜನಾಂಗದ ಸಂಸ್ಕøತಿ ಕಥನ : ಡಿ.ಬಿ.ನಾಯಕ

ಕಲಬುರಗಿ,ಫೆ.1- ” ಒಂದು ಕಾಲಘಟ್ಟದ ಸಾಮಾಜಿಕ ಬದುಕು, ಜನ ಜೀವನ, ಆರ್ಥಿಕ ಸ್ಥಿತಿ- ಗತಿ, ಗ್ರಾಮ ಪರಿಸರ, ಕೌಟುಂಬಿಕ ಸಂಬಂಧಗಳು, ಸಾಹಿತ್ಯ , ಶಿಕ್ಷಣ, ಮಾನವೀಯ ಮೌಲ್ಯಗಳು ಇನ್ನೂ ಅನೇಕ ವಸ್ತು ವಿಷಯಗಳು ವಿಭಿನ್ನ ಮತ್ತು ವಿಶಿಷ್ಟವಾಗಿ ಅನಾವರಣಗೊಂಡಿರುವ ಈ ಆತ್ಮಕಥೆ ಇಡೀ ಬಂಜಾರ ಜನಾಂಗದ ಸಂಸ್ಕೃತಿ ಕಥನವಾಗಿದೆ ” ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ನಾಡಿನ ಪ್ರಸಿದ್ಧ ಜಾನಪದ ವಿದ್ವಾಂಸರಾದ ಪೆÇ್ರ.ಡಿ. ಬಿ. ನಾಯಕ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ವಿಶ್ವ ಪ್ರಕಾಶನ ಸಂಸ್ಥೆ ಆಯೋಜಿಸಿದ್ದ ಪೆÇ್ರ.ಕೃಷ್ಣ ನಾಯಕ ಅವರ ವಲಸೆ ಹಕ್ಕಿಯ ಹಾಡು ಆತ್ಮಕಥೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈವರೆಗೆ ಐದು ಕಥಾ ಸಂಕಲನಗಳನ್ನು, ಒಂದು ಸಮಗ್ರ ಕಥಾ ಸಂಕಲನ ನೀಡಿದ ಪೆÇ್ರ. ಕೃಷ್ಣ ನಾಯಕ ಕನ್ನಡ ಕಥಾ ಸಾಹಿತ್ಯ ಕ್ಷೇತ್ರ ಕಡೆಗಣಿಸಲು ಸಾಧ್ಯವಿಲ್ಲದ ಸಮರ್ಥ ಕಥೆಗಾರರಲ್ಲಿ ಒಬ್ಬರು. ವಲಸೆ ಹಕ್ಕಿಯ ಹಾಡು ಆತ್ಮಕಥೆ 2024 ನೆಯ ಸಾಲಿನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ (ಬೆಂಗಳೂರು) ಪ್ರಶಸ್ತಿ ಪುರಸ್ಕೃತ ಕೃತಿ ಆಗಿದ್ದು, ಅದು ಅತೀ ಕಡಿಮೆ ಅವಧಿಯಲ್ಲಿ ಮರುಮುದ್ರಣ ಕಂಡು ಹೊರಬಂದಿರುವುದು ಕೃತಿಯ ವಿಶೇಷತೆಗೆ ಕನ್ನಡಿ ಹಿಡಿಯುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲವು ಮಹತ್ವದ ಆತ್ಮ ಕಥೆಗಳು ಬಂದಿವೆ. ಅವುಗಳ ಸಾಲಿಗೆ ಸೇರುವಂಥ ಆತ್ಮಕಥೆ ವಲಸೆ ಹಕ್ಕಿಯ ಹಾಡು ಕೃತಿಯಾಗಿದೆ. ಈ ಕೃತಿಯ ಹೆಸರಿನಲ್ಲಿಯೇ ನೆಲಮೂಲ ಸಂಸ್ಕೃತಿಯ ಚಹರೆಗಳಿದ್ದು, ಲೇಖಕ ತನ್ನ ಬದುಕಿನ ನೋವು, ನಲಿವುಗಳ ನೆನಪುಗಳೊಂದಿಗೆ ಮುಖಾಮುಖಿಯಾಗುತ್ತ ಸಮುದಾಯದ ಒಳಸುಳಿಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಸಾಹಿತಿಗಳು , ಅನುಭವಿಗಳು, ಮತ್ತು ಚಿಂತಕರು ಬರೆಯುವ ಆತ್ಮಕಥೆಗಳು ಯುವ ಜನಾಂಗಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಪ್ರೇರಣೆ ಆಗುತ್ತವೆ.” ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸೂರ್ಯಕಾಂತ ಸೊನ್ನದ , “ಆತ್ಮಕಥನ ಬರೆಯುವುದು ತುಂಬ ಕಷ್ಟದ ಕೆಲಸ. ಅದರಲ್ಲಿ ವ್ಯಕ್ತಿ ತನ್ನ ಬದುಕಿನ ಜೊತೆಗೆ ಸುತ್ತಲಿನ ಪರಿಸರದ ಕುರಿತು ಸತ್ಯಾಸತ್ಯತೆಗಳನ್ನು ಬಿಚ್ಚಿಡಬೇಕಾಗುತ್ತದೆ. ಹಾಗೆಂದೇ ಆತ್ಮಕಥನವು ಸಿಹಿ ಕಹಿ ನೆನಪುಗಳ ಬುತ್ತಿಯಾಗಿರುತ್ತದೆ. ಪೆÇ್ರ. ಕೃಷ್ಣ ನಾಯಕ ತಮ್ಮ ಆತ್ಮಕಥನದಲ್ಲಿ ವೈಯಕ್ತಿಕ ಬದುಕಿನ ಅನುಭವಗಳನ್ನು ತುಂಬ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ. ಈ ಆತ್ಮಕಥನ ಕೃತಿ ಕೈಗೆತ್ತಿಕೊಂಡರೆ ಓದಿ ಮುಗಿಸುವವರೆಗೂ ಕೆಳಗಿಡಲು ಮನಸ್ಸಾಗುವುದಿಲ್ಲ. ಇದು ಅದಮ್ಯ ಬದುಕಿನ ಅನನ್ಯತೆಯನ್ನು ಮತ್ತು ಜೀವನ ಪ್ರೀತಿಯನ್ನು ಬಿಚ್ಚಿಡುವ ಅಪರೂಪದ ಆತ್ಮಕಥನ ಕೃತಿಯಾಗಿದೆ ” ಎಂದರು. ಕೃತಿಯ ಲೇಖಕರಾದ ಪೆÇ್ರ. ಕೃಷ್ಣ ನಾಯಕ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು, ಕಥೆಗಾರ ಸಿ. ಎಸ್.ಆನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಕಾಶಕರಾದ ಉಷಾ ನಾಯಕ, ಗೀತಾರಾಣಿ ನಾಯಕ, ಪಲ್ಲವಿ ಚವ್ಹಾಣ, ಡಾ.ಆನಂದ ನಾಯಕ, ಸಂಜೀವಕುಮಾರ ಚವ್ಹಾಣ ಇನ್ನೂ ಅನೇಕ ಸಾಹಿತ್ಯ ಆಸಕ್ತರು ಉಪಸ್ಥಿತರಿದ್ದರು.