
ಬೆಂಗಳೂರು, ನ. ೨೦- ಬೆಂಗಳೂರಿನಲ್ಲಿ ನಿನ್ನೆ ಹಾಡ ಹಗಲೇ ೭ ಕೋಟಿ ರೂ.ಗಳಿಗೆ ಹೆಚ್ಚು ಹಣ ದೋಚಿರುವ ಪ್ರಕರಣ ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತು ಹೋಗಿದೆ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ ಸರ್ಕಾರವೇ ಇಲ್ಲ ಸತ್ತು ಹೋಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬದುಕಿದ್ದಿದರೆ ದರೋಡೆಕೋರರಿಗೆ ಭಯ ಇರುತ್ತದೆ. ಸರ್ಕಾರ ಸತ್ತಿದೆ ಹಾಗಾಗಿ ಹಾಡ ಹಗಲೆ ದರೋಡೆ ಅಪರಾಧಗಳು ಎಗ್ಗಿಲ್ಲದೆ ನಡೆದಿದೆ. ಕಾನೂನು ಸುವ್ಯವಸ್ಥೆಯಂತೂ ಪೂರ್ಣ ಕುಸಿದಿದೆ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಕುರ್ಚಿಗಾಗಿ ದೆಹಲಿ ಕಡೆ ಮುಖ ಮಾಡಿದ್ದಾರೆ. ಯಾರಿಗೂ ಆಡಳಿತದತ್ತ ಗಮನ ಇಲ್ಲ. ಆಡಳಿತದಲ್ಲಿ ಬಿಗಿ ಇಲ್ಲದೇ ಇರುವುದು ಅಪರಾಧ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ ಎಂದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ರಸ್ತೆ ಗುಂಡಿಗಳಿದ್ದರೂ ನಗದು ದೋಚಿದ ದರೋಡೆಕೋರರು ಅಷ್ಟು ಬೇಗ ಪಾರಾಗಿರುವುದು ಅಚ್ಚರಿ ತಂದಿದೆ. ನಮಗಂತೂ ಬೆಂಗಳೂರು ರಸ್ತೆಯಲ್ಲಿ ಗುಂಡಿಗಳಿರುವುದರಿಂದ ವೇಗವಾಗಿ ಸಂಚರಿಸಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ಸರ್ಕಾರ ಬಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಿವೆ. ದರೋಡೆಕೋರರ ಸ್ವರ್ಗ ಕರ್ನಾಟಕ ಆಗಿದೆ ಎಂದು ದೂರಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದ ತನಿಖೆ ಪೂರ್ಣಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವರದಿಯಲ್ಲಿ ಏನಿರುತ್ತದೆ ಅಂತ ಗೊತ್ತಿರುತ್ತದೆ. ಸರ್ಕಾರಕ್ಕೆ ಕ್ಲೀನ್ ಚಿಟ್ ಸಿಕ್ಕಿರುತ್ತದೆ. ಆರ್ಸಿಬಿ ಮತ್ತು ಕೆಸಿಎ ಮೇಲೆ ಗೂಬೆ ಕೂರಿಸುತ್ತಿರುವ ಈ ಎಸ್ಐಟಿ ವರದಿಗೆ ಮೂರು ಪೈಸೆ ಬೆಲೆ ಇರಲ್ಲ ಎಂದರು.
ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ಪೂರೈಸಿರುವ ಬಗ್ಗೆ ಪತ್ರಿಕೆಗಳ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಫೋಟೋ ಇದೆ. ಡಿಸಿಎಂ ಫೋಟೋ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಲಸ ಒಬ್ಬರದು, ಲಾಭ ಇನ್ನೊಬ್ಬರದು ಎಂದು ಹೇಳಿರುವುದನ್ನು ನೋಡಿದರೆ ಕೆಲಸ ನನ್ನದು, ಓಸಿಯಾಗಿ ಸಿಎಂ ಆಗಿರುವುದು ನೀವು ಎಂದು ಸಿದ್ಧರಾಮಯ್ಯ ಅವರಿಗೆ ಹೇಳಿದಂತಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಎರಡಕ್ಕೂ ರಾಜೀನಾಮೆ ಕೊಡುತ್ತಾರೆ ಕಾದು ನೋಡಿ ಎಂದರು.


































