
ನವದೆಹಲಿ, ನ.೨೦- ಕೇಂದ್ರ ಸರ್ಕಾರ ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳದ ಕಮಿಷನ್ ಅನ್ನು ಸಮಾನಾಂತರವಾಗಿ ಪ್ರತಿ ಕ್ವಿಂಟ್ವಾಲ್‌ಗೆ ೨೭ ರೂ.ಗಳಿಗೆ ಹೆಚ್ಚಿಸಿ ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ಜೋಶಿ ತಿಳಿಸಿದ್ದಾರೆ.
ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ರಚಿಸಿದ ಸಮಿತಿಯು ಪಡಿತರ ಧಾನ್ಯಗಳ ಕಮಿಷನ್ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಅದರ ಅನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಸೊಸೈಟಿಗಳ ಬಲವರ್ಧನೆ ಮತ್ತು ರೈತರಿಗೂ ಹೆಚ್ಚಿನ ಅನುಕೂಲವಾಗುವಂತೆ ಈ ಪಡಿತರ ಧಾನ್ಯಗಳ ಕಮಿಷನ್ ಅನ್ನು ಪರಿಷ್ಕರಿಸಿ, ದೇಶದ ಪಡಿತರ ವ್ಯವಸ್ಥೆಗೆ ಉತ್ತೇಜನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಅವರ ಈ ನಿಲುವಿನಿಂದ ಆಯಾ ರಾಜ್ಯಗಳಲ್ಲಿ ಧಾನ್ಯ ಸಂಗ್ರಹಣೆ ಹೆಚ್ಚಳಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಮತ್ತು ಸ್ಥಳೀಯವಾಗಿ ಸೊಸೈಟಿ, ಸಂಘಗಳ ಬಲವರ್ಧನೆಗೆ ಸಹಕಾರಿಯಾಗಲಿದೆ. ಅಲ್ಲದೇ, ಕೇಂದ್ರ ಸರ್ಕಾರದ ಶ್ರೀ ಅನ್ನ ಯೋಜನೆಗೆ ಮತ್ತಷ್ಟು ಬೆಂಬಲ ಸಿಕ್ಕಂತಾಗಿದೆ ಎಂದು ಕೇಂದ್ರ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿ ಕ್ವಿಂಟಾಲ್‌ಗೆ ೨೭ ರೂ. ಕಮಿಷನ್: ಇದೀಗ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮಹತ್ತರ ಕ್ರಮ ಕೈಗೊಂಡಿದ್ದು, ರಾಜ್ಯಗಳಲ್ಲಿ ಗೋಧಿ, ಜೋಳ, ಮೆಕ್ಕೆಜೋಳ ಮತ್ತು ರಾಗಿ ವಿತರಿಸುವ ಸೊಸೈಟಿಗಳಿಗೆ ಕಮಿಷನ್ ಅನ್ನು ಪ್ರತಿ ಕ್ವಿಂಟಾಲ್‌ಗೆ ೨೭ ರೂ. ಹೆಚ್ಚಿಸಲಾಗಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಯೋಜನೆಗಳಡಿ ವಿತರಿಸುವ ಧಾನ್ಯಗಳಿಗೆ ದರ ನಿಗದಿ:
ರಾಜ್ಯಗಳಿಗೆ ಪಾವತಿಸಬೇಕಾದ ಕಮಿಷನ್ ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ ೧೧.೭೫ ರೂ., ಜೋಳ ಮತ್ತು ರಾಗಿಗೆ ಕ್ವಿಂಟಾಲ್‌ಗೆ ೧೫ ರೂ.ಗಳಿತ್ತು. ಈಗ ಅದನ್ನು ೨೭ ರೂ.ಗೆ ಪರಿಷ್ಕರಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಾದ ಪೋಷಣ್ ಮತ್ತು ಅಡಿ ವಿತರಿಸಲಾಗುವ ಆಹಾರ ಧಾನ್ಯಗಳಿಗೆ ಈ ದರ ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಶಿಫಾರಸು ಮಾಡಿದ್ದ ಸಮಿತಿ: ಸೊಸೈಟಿಗಳಿಗೆ ನೀಡಲಾಗುವ
ಕಮಿಷನ್ ದರ ಪರಿಶೀಲಿಸಲು ಹಣಕಾಸು ಅಧ್ಯಕ್ಷತೆಯಲ್ಲಿ ಇಬ್ಬರು ರಾಜ್ಯ ಆಹಾರ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ಹೊಂದಿರುವ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಮೆಕ್ಕೆಜೋಳ, ಜೋಳ, ರಾಗಿ ಕಮಿಷನ್ ಅನ್ನು ಗೋಧಿಗೆ ಸಮಾಂತರಗೊಳಿಸಲು ಶಿಫಾರಸು ಮಾಡಿತ್ತು. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.


































