ಎಲ್ಲ ಕ್ಯಾಬ್‌ಗಳಲ್ಲಿ ಸಹಾಯವಾಣಿ ಸ್ಟಿಕ್ಕರ್

ಬೆಂಗಳೂರು, ನ.೨೦-ನಗರದಲ್ಲಿ ಸಂಚರಿಸುವ ಎಲ್ಲಾ ಕ್ಯಾಬ್‌ಗಳಲ್ಲಿ ೧೧೨ ತುರ್ತು ಸಹಾಯವಾಣಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಮೊಬೈಲ್ ಅಪ್ಲಿಕೇಷನ್ ಬಗ್ಗೆ ಮಾಹಿತಿಯನ್ನು ಹೊಂದಿರುವ ಸ್ಟಿಕ್ಕರ್‌ಗಳನ್ನು ಕಡ್ಡಾಯವಾಗಿ ಅಂಟಿಸಬೇಕೆಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.


ಕ್ಯಾಬ್‌ಗಳಲ್ಲಿ ಪ್ರಯಾಣಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಸ್ಟಿಕ್ಕರ್‌ಗಳನ್ನು ಕಡ್ಡಾಯವಾಗಿ ಅಂಟಿಸಬೇಕು ಎಂದು ಹೇಳಿದ್ದಾರೆ.


ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಪ್ರಯಾಣಿಕರ ಮೇಲೆ ಹೆಚ್ಚಿನ ಗಮನಹರಿಸಲಾಗಿದೆ. ಸ್ಪಷ್ಟವಾಗಿ ಗೋಚರಿಸುವ ಸಹಾಯವಾಣಿ ವಿವರಗಳು ಅಪರಾಧವನ್ನು ತಡೆಯಲು ಮತ್ತು ಸಂಚಾರ ನಿರ್ವಹಣೆಗೆ ಸಹಾಯ ಮಾಡಬಹುದು ಎಂದು ಅವರು ತಿಳಿಸಿದರು.


ವರದಿಯ ಪ್ರಕಾರ, ಕ್ಯಾಬ್ ನಿರ್ವಾಹಕರು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಮುದ್ರಿತವಾದ ಸ್ಟಿಕ್ಕರ್‌ಗಳನ್ನು ತಮ್ಮ ವಾಹನಗಳ ಎರಡು ಬದಿಗಳಲ್ಲಿ ಅಂಟಿಸುವಂತೆ ಸೂಚನೆ ನೀಡಿದ್ದಾರೆ. ಹೊಸ ಆದೇಶದಲ್ಲಿ ೧೨,೦೦೦ ಕ್ಕೂ ಹೆಚ್ಚು ಕ್ಯಾಬ್‌ಗಳನ್ನು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಉಳಿದ ಎಲ್ಲಾ ವಾಹನಗಳು ಅನುಮೋದಿತ ಸ್ಟಿಕ್ಕರ್‌ಗಳನ್ನು ಅಳವಡಿಸಲು ದೃಢವಾದ ಗಡುವನ್ನು ಸಹ ನಿಗದಿಪಡಿಸಲಾಗಿದೆ.


ಪೊಲೀಸರು ನೀಡಿದ ಟೆಂಪ್ಲೇಟ್ ೧೧೨ ಸಹಾಯವಾಣಿ ಸಂಖ್ಯೆಯೊಂದಿಗೆ ಬಳಕೆದಾರರನ್ನು ನೇರವಾಗಿ ಕೆಎಸ್‌ಪಿ ಮೊಬೈಲ್ ಅಪ್ಲಿಕೇಶನ್‌ಗೆ ಸಂಪರ್ಕಿಸುವ ಕ್ಯೂಆರ್ ಕೋಡ್ ಅನ್ನು ಒಳಗೊಂಡಿರುತ್ತದೆ. ಅಧಿಕಾರಿಗಳ ಪ್ರಕಾರ, ಇದರಿಂದ ಒಂಟಿಯಾಗಿ ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ. ಈ ತುರ್ತು ಸಹಾಯವಾಗಿ ಪೊಲೀಸ್ ಕಮಿಷನರ್ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದೆ.


೧೧೨ ಸಂಖ್ಯೆಗೆ ಕರೆ ಮಾಡಿದರೆ ಹದಿನೈದೆ ನಿಮಿಷಗಳಲ್ಲಿ ಪೊಲೀಸರು ನೀವು ಕೊಟ್ಟ ವಿಳಾಸಕ್ಕೆ ಹಾಜರಾಗಿ ಸಮಸ್ಯೆಗೆ ಪರಿಹಾರವನ್ನು ಕೊಡುವ ಕೆಲಸವನ್ನು ಮಾಡುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯಾ ನಿಧಿ ಯೋಜನೆಯಡಿ ಏಕ ಸಂಖ್ಯೆಯ ಬಳಕೆಯನ್ನು ಜಾರಿಗೆ ತರಲಾಗಿದೆ. ಮಹಿಳೆಯರು ರಾತ್ರಿ ವೇಳೆ ಒಬ್ಬರೇ ಓಡಾಟವನ್ನು ನಡೆಸಿದಾಗ ಯಾರಾದರೂ ಕೆಟ್ಟದಾಗಿ ನಡೆದುಕೊಂಡರೆ ಅವರ ಸಹಾಯಕ್ಕೆ ಧಾವಿಸಲು ಈ ಸಂಖ್ಯೆಯನ್ನು ಪರಿಚಯಿಸಲಾಗಿದೆ.


೧೧೨ಗೆ ಕರೆ ಮಾಡಿದಾಗ ಮೊದಲು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಪೊಲೀಸ್ ಠಾಣೆ ಯಾವ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಖಾತರಿ ಮಾಡಬೇಕು. ನಂತರ ಎಲ್ಲಿಂದ ಮಾತನಾಡುತ್ತಿದ್ದೇವೆ ಏನು ಸಮಸ್ಯೆ ಆಗಿದೆ, ಫೋನ್ ನಂಬರ್ ಇತ್ಯಾದಿ ಮಾಹಿತಿ ನೀಡಬೇಕಾಗುತ್ತದೆ.


ಕೆಎಸ್‌ಪಿ ಮೊಬೈಲ್:


ಕೆಎಸ್‌ಪಿ ಮೊಬೈಲ್ ಅಪ್ಲಿಕೇಶನ್ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಆಪ್ ಆಗಿದ್ದು, ನಾಗರಿಕರು ಸುಲಭವಾಗಿ ಪೊಲೀಸ್ ಸೇವೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಆಪ್ ಬಳಸಿ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ SಔS ಕಳುಹಿಸಬಹುದು, ಇ-ಲಾಸ್ಟ್ (ಕಳೆದುಹೋದ ವಸ್ತುಗಳ) ದೂರು ದಾಖಲಿಸಬಹುದು, ಟ್ರಾಫಿಕ್ ದಂಡ ಪಾವತಿಸಬಹುದು, ಮತ್ತು ಪೊಲೀಸ್ ಠಾಣೆಗಳ ವಿವರಗಳನ್ನು ಪಡೆಯಬಹುದು.