
ಗುಳೇದಗುಡ್ಡ,ಅ.೧೬: ಪಟ್ಟಣದಲ್ಲಿ ಬೀದಿ ನಾಯಿಗಳನ್ನು ನಿಯಂತ್ರಿಸಲು ನ್ಯಾಯಾಲಯದ ಸೂಚನೆಯಂತೆ ನಾಯಿಗಳ ಸಮಿಕ್ಷೆ ನಡೆಸಿ, ಹೆಣ್ಣು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಯಿತು.
ಬುಧವಾರ ಪುರಸಭೆ ಅಧ್ಯಕ್ಷ ಜ್ಯೋತಿ ಗೋವಿನಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ, ಪಟ್ಟದಲ್ಲಿ ಮೂತ್ರಾಲಯಗಳು ಗಬ್ಬೆದ್ದು ನಾರುತ್ತಿದ್ದು, ಸಿಬ್ಬಂದಿಗಳು ಸರಿಯಾಗಿ ಸ್ವಚ್ಛತೆ ಮಾಡುತ್ತಿಲ್ಲ, ಬ್ಲಿಚಿಂಗ್ ಪೌಡರ ಹಾಕುತ್ತಿಲ್ಲ ಇದರಿಂದ ಸಾರ್ವಜನಿಕರು ತೊಂದರೆಯಾಗುತ್ತಿದೆ ಎಂದು ಸದಸ್ಯ ಉಮೇಶ ಹುನಗುಂದ ಆರೋಪಿಸಿದರು. ಮೂತ್ರಾಲಯಗಳ ಸ್ವಚ್ಛತೆಗೆ ಅಗತ್ಯ ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಹೇಳಿದರು.
ಪಟ್ಟಣಕ್ಕೆ ಆಲಮಟ್ಟಿಯಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರು ಆಗಾಗ ಮೋಟರ್ ಕೆಟ್ಟುನಿಂತು ನೀರು ಸರಬರಾಜು ನಿಂತುಹೋಗುತ್ತದೆ. ಹೀಗೆ ಪದೇ ಪದೇ ನೀರಿನ ತೊಂದರೆಯಾಗದAತೆ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಸದಸ್ಯರು ಸೂಚನೆ ನೀಡಿದರು. ಘನತ್ಯಾಜ್ಯ ನಿರ್ವಹಣೆಯ ಘಟಕದಲ್ಲಿನ ಸುಮಾರು ೨ ಸಾವಿರ ಟನ್ ಗೊಬ್ಬರವನ್ನು ಪುರಸಭೆಗೆ ಲಾಭವಾಗುವಂತೆ ಮಾರಟ ಇಲ್ಲವೇ ಹರಾಜು ಹಾಕುವಂತೆ ಸಭೆಯಲ್ಲಿ ಠರಾವು ಮಾಡಲಾಯಿತು. ಪಟ್ಟಣದಲ್ಲಿನ ಸರಕಾರಿ ಪದವಿ ಕಾಲೇಜು ಕಟ್ಟಡಕ್ಕೆ ಜಾಗ ನೀಡಲಾಗಿತ್ತು ಆದರೆ ಆ ಜಾಗ ಕಟ್ಟಡಕ್ಕೆ ಯೋಗ್ಯವಲ್ಲ ಬೇರೆ ಜಾಗ ನೀಡುವಂತೆ ಇಲಾಖೆ ಸೂಚಿಸಿದ್ದು, ಪುರಸಭೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಕಾಲೇಜು ಕಟ್ಟಡಕ್ಕೆ ಸೂಕ್ತ ಜಾಗ ನೀಡಲು ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಗ್ನಿಶ್ಯಾಮಕ ಕೇಂದ್ರಕ್ಕೆ ಈಗಾಗಲೇ ಜಾಗ ನೀಡಲಾಗಿದ್ದು, ಆದರೆ ಈಗ ಅವರು ಆ ಜಾಗವನ್ನು ಅವರು ಏಕೆ ನಿರಾಕರಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದಾಗ ಆ ಬಗ್ಗೆ ವಿಚಾರ ಮಾಡೋಣ ಎಂದು ಸದಸ್ಯ ರಫೀಕ್ ಕಲ್ಬುರ್ಗಿ ಹೇಳಿದಾಗ, ವಿಷಯವನ್ನು ಅಲ್ಲಿಗೆ ಕೈಬಿಡಲಾಯಿತು. ಪುರಸಭೆಯ ಕಚೇರಿಯಲ್ಲಿ ಈಗಿನ ಪಿಠೋಪಕರಣಗಳನ್ನು ತಗೆದು ಹೊಸ ಪೀಠೋಪಕರಣಗಳನ್ನು ಅಳವಡಿಸಲು ಠರಾವು ಪಾಸ್ ಮಾಡಲಾಯಿತು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ ಕವಡಿಮಟ್ಟಿ, ವಿಠ್ಠಲಸಾ ಕಾವಡೆ, ಶ್ಯಾಮಸುಂದರ ಮೇಡಿ, ವಿನೋದ ಮದ್ದಾನಿ, ಪ್ರಶಾಂತ ಜವಳಿ, ಸಂತೋಷ ನಾಯಗಲಿ, ಯಲ್ಲಪ್ಪ ಮನ್ನಿಕಟ್ಟಿ, ಕಾಶೀನಾಥ ಕಲಾಲ, ಶಿಲ್ಪಾ ಹಳ್ಳಿ, ಜ್ಯೋತಿ ಆಲೂರ, ನಾಗರತ್ನಾ ಲಕ್ಕುಂಡಿ, ವಿದ್ಯಾ ಮುರಗೋಡ, ರಾಜವ್ವ ಹೆಬ್ಬಳ್ಳಿ, ರಾಜೇಶ್ವರ ಉಂಕಿ, ವಂದಾನ ಭಟ್ಟಡ ಹಾಗೂ ನಾಮನಿರ್ದೇಶನ ಸದಸ್ಯರು, ಜೆ.ಇ. ಎಂ.ಜಿ. ಕಿತ್ತಲಿ, ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ ಮತ್ತಿತರರು ಇದ್ದರು.