
ಕಲಬುರಗಿ,ಅ.9-ನಗರದ ಆಳಂದ ರಸ್ತೆಯ ವಿಶ್ವರಾಧ್ಯ ಗುಡಿ ಹತ್ತಿರವಿರುವ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವ ನೆಪದಲ್ಲಿ ಐವರು ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬ್-ಅರ್ಬನ್ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ನ್ಯೂ ರಾಘವೇಂದ್ರ ಕಾಲೋನಿಯ ವಿನೋದ ಅಲಿಯಾಸ್ ಚಾಕಲೇಟ್ ವಿನ್ಯಾ ತಂದೆ ಬಾಪು ಪಾಟೀಲ (18), ಭೂಪಾಲ್ ತೆಗನೂರ ಗ್ರಾಮದ ನಾಗೇಶ್ ತಂದೆ ವಿಠ್ಠಲರಾವ ಕಟ್ಟಿಮನಿ (19), ರಾಮತೀರ್ಥ ನಗರದ ವಿನೋದ ಅಲಿಯಾಸ್ ಟೈಗರ್ ವಿನೋದ ತಂದೆ ತಾಯಪ್ಪ ದಂಡಗುಲೆ (19) ಎಂಬುವವರನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಆಯುಧ, 2 ಬೈಕ್ ಜಪ್ತಿ ಮಾಡಿ ಆರೋಪಿಗಖನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಇತ್ತೀಚೆಗೆ ನಗರದ ಆಳಂದ ರಸ್ತೆಯ ವಿಶ್ವರಾಧ್ಯ ಗುಡಿ ಹತ್ತಿರವಿರುವ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುವ ನೆಪದಲ್ಲಿ ಐವರು ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಜಗಳ ತೆಗೆದು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಉಪ ವಿಭಾಗದ ಎಸಿಪಿ ಡಿ.ಜಿ.ರಾಜಣ್ಣ, ಪಿಐ ಸಂತೋಷ ಎಲ್.ತಟ್ಟೆಪಳ್ಳಿ, ಸಿಸಿಬಿ ಘಟಕದ ಪಿಐ ದಿಲೀಪ್ ಸಾಗರ್ ನೇತೃತ್ವದಲ್ಲಿ ಮತ್ತು ಪಿಎಸ್‍ಐ ಬಸವರಾಜ, ಸಿಬ್ಬಂದಿಗಳಾದ ಭೀಮ ನಾಯಕ, ಮಂಜುನಾಥ, ಅಶೋಕ, ಪ್ರಭಾಕರ, ಶಿವಲಿಂಗ, ಯಲ್ಲಪ್ಪ ಪೂಜಾರಿ ಅವರನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿವೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಶ್ಲಾಘಿಸಿದ್ದಾರೆ.