ನೂತನ ಕಾರ್ಮಿಕ ಭವನ ಲೋಕಾರ್ಪಣೆ

ತುಮಕೂರು, ಅ. ೯- ನಗರದ ಹನುಮಂತಪುರದ ಗಣೇಶನಗರದಲ್ಲಿ ೩.೨೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಮಿಕ ಭವನವನ್ನು ಕಾರ್ಮಿಕ ಸಚಿವ ಸಂತೋಷ ಎಸ್.ಲಾಡ್ ಲೋಕಾರ್ಪಣೆ ಮಾಡಿದರು.


ನಂತರ ಮಾತನಾಡಿದ ಅವರು, ಸರ್ಕಾರವು ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಲಭ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ನಿಟ್ಟಿನಲ್ಲಿ,
ಈ ಕಾರ್ಮಿಕ ಭವನವನ್ನು ನಿರ್ಮಿಸಲಾಗಿದ್ದು, ಭವನವು ಮುಂದಿನ ದಿನಗಳಲ್ಲಿ ಕಾರ್ಮಿಕರ ಸಭೆ, ತರಬೇತಿ ಶಿಬಿರಗಳಿಗೆ ಉತ್ತಮ ವೇದಿಕೆಯಾಗಿ ಉಪಯೋಗವಾಗಲಿದೆ ಎಂದು ತಿಳಿಸಿದರು. ಕಾರ್ಮಿಕ ವರ್ಗದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕಾರ್ಮಿಕರು ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್, ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಜಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.