ನೆರೆ ಹಾನಿ: ಪರಿಹಾರಕ್ಕೆ ಸಿಎಂ ಜೊತೆ ಚರ್ಚೆ

ಕಲಬುರಗಿ,ಸೆ.೩೦: ಕಲಬುರಗಿ, ವಿಜಯಪುರ ಸೇರಿದಂತೆ ಇಡೀ ರಾಜ್ಯದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣಕ್ಕಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಈ ಪೈಕಿ ರೈತರು ಅತಿ ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ, ಸೂಕ್ತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳೊಂದಿಗೆ ಈ ಭಾಗದ ಎಲ್ಲ ಸಚಿವರು ಸೇರಿ ಚರ್ಚಿಸುವುದಾಗಿ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.


ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಸೀನಾ ಕಣಿವೆಯಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಪ್ರವಾಹ ಉಂಟಾಗಿದೆ. ಸೀನಾ ಜಲಾಶಯದ ಸಾಮರ್ಥ್ಯ ಕಡಿಮೆ ಇರುವ ಕಾರಣಕ್ಕಾಗಿ ಅವರು ಪದೇಪದೆ ನೀರು ಬಿಡುಗಡೆ ಮಾಡುತ್ತಿರುತ್ತಾರೆ. ಇದರಿಂದ ನಮ್ಮ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.


ಭೀಮಾ ನದಿಯಲ್ಲಿ ಉಂಟಾಗಿರುವ ಪ್ರವಾಹದ ಕಾರಣಕ್ಕಾಗಿ ಬಹಳಷ್ಟು ಹಳ್ಳಿಗಳು ಮುಳುಗಡೆಯಾಗಿವೆ. ವಿಜಯಪುರ ಜಿಲ್ಲೆಯಲ್ಲಿ ೧.೫ ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಜಮೀನುಗಳಲ್ಲಿ ನೀರು ನಿಂತಿರುವ ಕಾರಣಕ್ಕಾಗಿ ಹಿಂಗಾರು ಬಿತ್ತನೆ ಕೂಡ ಸಾಧ್ಯವಿಲ್ಲ ಎಂದರು.


ಈಗಾಗಲೇ ರೈತರು ಬೆಳೆದಿರುವ ಬಹುತೇಕ ಬೆಳೆಗಳು ಪ್ರವಾಹ ಮತ್ತು ಅತ್ಯಧಿಕ ಮಳೆಯ ಕಾರಣಕ್ಕಾಗಿ ನೆಲ ಕಚ್ಚಿವೆ. ಇದರಿಂದಾಗಿ ಈ ಭಾಗದ ಎಲ್ಲ ಸಚಿವರು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸಿ ಪರಿಹಾರದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪುನರುಚ್ಚರಿಸಿದರು.


ಕೇಂದ್ರ ಹೊಣೆಗಾರಿಕೆ ಅರಿಯಲಿ


ವಿಪರೀತ ಮಳೆ ಮತ್ತು ಪ್ರವಾಹದ ಕಾರಣಕ್ಕಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆ ಅರಿತು ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ (ಎನ್.ಡಿ.ಆರ್.ಎಫ್) ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದರು.


ಎನ್.ಡಿ.ಆರ್.ಎಫ್ ನಿಯಮದ ಬಗ್ಗೆ ಗೊಂದಲ ಇದೆ. ಈ ಕುರಿತು ಕೇಂದ್ರ ಸರ್ಕಾರ ಗಮನ ಹರಿಸಬೇಕು. ಇಂತಹ ಸಂದರ್ಭದಲ್ಲಿ ರೈತರ ಕೈ ಹಿಡಿಯದೆ ಹೋದರೆ ಹೇಗೆ ಎಂದು ಅವರು ಪ್ರಶ್ನಿಸಿದರು.


ಬಿವೈವಿಗೆ


ರಾಜ್ಯದಲ್ಲಿ ಮುಠ್ಠಾಳ ಸರ್ಕಾರವಿದೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ್ ಗರಂ ಆಗಿ ತಿರುಗೇಟು ನೀಡಿದರು.


ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ರೂ. ೫ ಸಾವಿರ ಕೋಟಿ ಘೋಷಣೆ ಮಾಡಿದ ನಂತರ ಆ ಹಣವನ್ನು ಕೊಟ್ಟಿದೆಯಾ? ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಕೊಡದೆ ಇರೋರು ಮುಟ್ಟಾಳರು ತಾನೇ ಎಂದು ಅವರು ಪ್ರಶ್ನಿಸಿದರು.ನಮ್ಮ ರಾಜ್ಯಕ್ಕೆ ೧೪ ಮತ್ತು ೧೫ನೇ ಹಣಕಾಸಿನಲ್ಲಿ ಬರಬೇಕಾದ ಹಣ ಕೊಡದವರು ಮುಠ್ಠಾಳರು ಎಂದರಲ್ಲದೆ, ಬಿಜೆಪಿಯವರು ಮುಟ್ಟಾಳರು ಎಂದು ಗುಡುಗಿದರು.