
ಅಥಣಿ :ಅ.೧೮: ಹಿಂದೂ ಮುಸ್ಲಿಂ ಎಂಬ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಭಾವನೆ ಬಿತ್ತುತ್ತಿರುವ ಇಂದಿನ ದಿನಮಾನಗಳಲ್ಲಿ ಹಿಂದೂ ಮತ್ತು ಮುಸ್ಲಿಮರು ಗ್ರಾಮೀಣ ಪ್ರದೇಶಗಳಲ್ಲಿ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬAತೆ ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನ ಗೂಗವಾಡ ಗ್ರಾಮದಲ್ಲಿ ಹಾಜಿ ಶಮಶುದ್ದಿನ ನಬಿಸಾಬ ಕಿರಣಗಿ ಮುಸ್ಲಿಂ ಧರ್ಮದವರಾದರೂ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ ೧೦೧ ಗ್ರಂಥಗಳನ್ನು ಭಕ್ತರಿಗೆ ದಾನ ರೂಪದಲ್ಲಿ ನೀಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಹೌದು.. ಅಥಣಿ ಸಮೀಪದ ಗೂಗವಾಡ ಗ್ರಾಮದ ಹೊಳೆ ಹುಚ್ಚೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಮಠದ ಹುಚ್ಚೇಶ್ವರ ಸ್ವಾಮಿಗಳ ಪ್ರವಚನದಿಂದ ಪ್ರೇರಣೆ ಹೊಂದಿ ಸ್ವಯಂ ಪ್ರೇರಿತವಾಗಿ ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿರುವ ಭಗವದ್ಗೀತೆಯನ್ನು ಭಕ್ತರಿಗೆ ಶ್ರೀಗಳ ಮೂಲಕ ಉಚಿತವಾಗಿ ವಿತರಿಸಿ ಭಾವಿಕ್ಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಈ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಜತ್ತ ಮತಕ್ಷೇತ್ರದ ಶಾಸಕ ಗೋಪಿಚಂದ ಪಡೋಲಕರ ಶ್ರೀಮಠದಿಂದ ಸತ್ಕಾರ ಮತ್ತು ಭಗವದ್ಗೀತೆ ಸ್ವೀಕರಿಸಿ ಮಾತನಾಡಿದರು. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಗಳು ಜಗತ್ತಿಗೆ ಶ್ರೇಷ್ಠವಾಗಿವೆ. ಗೂಗವಾಡ ಗ್ರಾಮದಲ್ಲಿ ಜರುಗುತ್ತಿರುವ ಈ ಧಾರ್ಮಿಕ ಕಾರ್ಯಕ್ರಮ ಯಾವುದೇ ಜಾತಿ ಮತ ಭೇದವಿಲ್ಲದೆ ಎಲ್ಲರನ್ನ ಒಗ್ಗೂಡಿಸಿದೆ. ಮುಸ್ಲಿಂ ಧರ್ಮದ ಹಾಜಿ ಶಮಶುದ್ದಿನ ಕಿರಣಗಿ ಅವರು ಹಿಂದೂ ಧರ್ಮದ ಭಗವದ್ಗೀತೆಯನ್ನು ಉಚಿತವಾಗಿ ವಿತರಿಸಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿ ಭಾವೈಕ್ಯತೆ ಮೆರೆದಿರುವುದು ಎಲ್ಲರಿಗೆ ಮಾದರಿಯಾಗಿದೆ. ಶ್ರೀ ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ನಾನು ಕೂಡ ಸೇವೆ ಸಲ್ಲಿಸುತ್ತೇನೆ. ಮೊದಲ ಹಂತವಾಗಿ ಇಲ್ಲಿನ ಕಲ್ಯಾಣ ಮಂಟಪದ ನಿರ್ಮಾಣಕ್ಕಾಗಿ ೨೫ ಲಕ್ಷ ರೂ ಅನುದಾನ ಒದಗಿಸುವುದಾಗಿ ವಾಗ್ದಾನ ಮಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಹಾರೂಗೇರಿಯ ಖ್ಯಾತ ಸಾಹಿತಿ ಡಾ.ವ್ಹಿ.ಎಸ್.ಮಾಳಿ ಮಾತನಾಡಿ ಮಾತನಾಡಿ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಕನ್ನಡಿಗರಿಗೆ ಶ್ರೀಮಠದ ಮೂಲಕ ಹುಚ್ಚೇಶ್ವರ ಸ್ವಾಮೀಜಿ ಅವರು ಆಧ್ಯಾತ್ಮ ಪ್ರವಚನಗಳನ್ನು ನಡೆಸುವ ಮೂಲಕ ಧಾರ್ಮಿಕ ಪರಂಪರೆಯನ್ನು, ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿ ಉಳಿಸುವ ಕಾಯಕ ಮಾಡುತ್ತಿದ್ದಾರೆ. ಗಡಿನಾಡಿನ ಕನ್ನಡ ಗುಡಿಯಾಗಿರುವ ಹೊಳೆ ಹುಚ್ಚೇಶ್ವರ ಮಠದಲ್ಲಿ ಭಾವೈಕ್ಯತೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ಮತ್ತು ನೇತೃತ್ವ ವಹಿಸಿದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ ಬಸವಣ್ಣನವರು ನೀಡಿದ ಕಾಯಕ ಮಂತ್ರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಡಿಸಿಕೊಳ್ಳಬೇಕು. ಕಾಯಕದಿಂದ ಬಂದ ಸ್ವಲ್ಪ ಭಾಗವನ್ನು ಸಮಾಜಮುಖಿ ಸೇವೆಗಳಿಗೆ, ಧಾರ್ಮಿಕ ಸೇವೆಗಳಿಗೆ ನೀಡುವ ಮೂಲಕ ಬದುಕನ್ನ ಸಾರ್ಥಕ ಮಾಡಿಕೊಳ್ಳಬೇಕು. ಎಲ್ಲರೂ ಸಾಮರಸ್ಯದಿಂದ ಬದುಕು ನಡೆಸುವ ಮೂಲಕ ಇತರರಿಗೆ ಮಾದರಿಯಾಗಬೇಕು. ದೇಶದಲ್ಲಿ ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ದ್ವೇಷದ ಭಾವನೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನಮ್ಮೂರಿನ ಮುಸ್ಲಿಂ ಧರ್ಮದ ಹಾಜಿ ಶಮಸುದ್ದಿನ ಕಿರಣಗಿ ಹಿಂದೂ ಭಕ್ತಾದಿಗಳಿಗೆ ಭಗವದ್ಗೀತೆಯ ಕೃತಿಗಳನ್ನು ವಿತರಿಸಿ ಸಾಮರಸ್ಯ ಮೆರೆಯುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸತ್ಕರಿಸಿ ಆಶೀರ್ವದಿಸಿದರು.
ನಂತರ ಅಥಣಿಯ ಶ್ರೀ ಶಿವಯೋಗಿ ಕಲಾತಂಡದ ವಿಜಯ ಹುದ್ದಾರ ನೇತೃತ್ವದಲ್ಲಿ ವಚನ ಗಾಯನ ಹಾಗೂ ಸಂಗೀತ ಕಾರ್ಯಕ್ರಮ ಜರುಗಿದವು.ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಯಗೊಂಡ ಅಂದಾನಿ, ಗಂಗಪ್ಪ ಕೊಂಕಣಿ, ಮಲ್ಲಪ್ಪ ಅಂದಾನಿ, ಮಹಾದೇವ ಜತ್ತಿ, ರಾಜು ಅಂದಾನಿ, ಸಿದ್ಧಪ್ಪಾ ಮದಭಾವಿ, ಬಸಗೊಂಡ ಚೌಗಲೆ, ರಾಮಗೊಂಡ ಸಮಗೊಂಡನವರ, ಯುಸೂಫ ಕಿರಣಗಿ, ಕಿರಣ ಗೆಜ್ಜಿ, ಅವಿನಾಶ ಪಾಟೀಲ, ರಸೂಲಸಾಬ ನದಾಫ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಗುರು ಶಾಂತಯ್ಯ ಹಿರೇಮಠ ಸ್ವಾಗತಿಸಿದರು. ವಿಜಯ ಹುದ್ಧಾರ ನಿರೂಪಿಸಿದರು. ಚನ್ನಪ್ಪ ನಂದೇಶ್ವರ ವಂದಿಸಿದರು.