
ಬೆಂಗಳೂರು, ಜೂ. ೩೦- ಬೆಂಗಳೂರಿನ ಹೂರವಲಯದ ಕಾಡುಗೋಡಿ ಬಳಿ ದಲಿತರನ್ನ ಒಕ್ಕಲಿಬ್ಬಿಸುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ಬಿಜೆಪಿ ನಾಯಕರುಗಳು ಇಂದು ಧರಣಿ ನಡೆಸಿದರು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿಯ ಹಲವು ಶಾಸಕರು ಮುಖಂಡರುಗಳು ಧರಣಿ ಪ್ರತಿಭಟನೆ ನಡೆಸಿ ಕಾಡುಗೋಡಿ ಬಳಿ ಅರಣ್ಯ ಇಲಾಖೆ ದಲಿತರ ಜಮೀನುಗಳನ್ನ ವಶಪಡಿಸಿಕೊಳ್ಳುವ ಕೆಲಸ ನಡೆಸಿರುವುದು ಸರಿಯಲ್ಲ ಈ ಕೂಡಲೇ ಈ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಶಾಸಕ ಸಿಮೆಂಟ್ ಮಂಜುನಾಥ್, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾದ ವೈ. ಸಂಪಂಗಿ, ವೈ.ರಾಮಕ್ಕ, ಎಸ್. ಬಾಲರಾಜು ಮತ್ತು ಮುಖಂಡರು ಭಾಗಿಯಾಗಿ ಅರಣ್ಯ ಇಲಾಖೆಯ ವಿರುದ್ಧ ಕಿಡಿಕಾರಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು
ಸರ್ಕಾರ ದಲಿತರ ಕತ್ತು ಹಿಸುಕುತ್ತಿದೆ
ಚಲವಾದಿ ಆರೋಪ
ಸರಕಾರವು ಸಚಿವ ಈಶ್ವರ ಖಂಡ್ರೆಯವರ ನೇತೃತ್ವದಲ್ಲಿ ದಲಿತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.
ತಮ್ಮ ನೇತೃತ್ವದಲ್ಲಿ ಇಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಬೆಂಗಳೂರು ನಗರ ಜಿಲ್ಲೆಯ ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ಕಾಡುಗೋಡಿಯ ದಿನ್ನೂರು ಗ್ರಾಮದಲ್ಲಿ ದಲಿತರು ವ್ಯವಸಾಯ ಮಾಡುತ್ತಿರುವ ಬೆಲೆಬಾಳುವ ಜಮೀನನ್ನು ಅರಣ್ಯ ಇಲಾಖೆಯು ವಶಕ್ಕೆ ಪಡೆಯಲು ಮುಂದಾಗಿದೆ. ಸಚಿವ ಈಶ್ವರ ಖಂಡ್ರೆಯವರು ನೇತೃತ್ವ ವಹಿಸಿದ್ದು, ಇದು ದಲಿತರ ಕತ್ತು ಹಿಸುಕುವ ಕೆಲಸ ಎಂದು ಟೀಕಿಸಿದರು.
ದಲಿತರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯನ್ನು ಮುಖ್ಯಮಂತ್ರಿಗಳು ತಕ್ಷಣ ನಿಲ್ಲಿಸಬೇಕು. ಅರಣ್ಯ ಇಲಾಖೆಯು ತನ್ನ ಕೆಲಸ ಬಿಟ್ಟು ಬೆಲೆಬಾಳುವ ಜಮೀನು ಕಬಳಿಸುವ ಕೆಲಸಕ್ಕೆ ಮುಂದಾಗಿದೆ. ಹಲವು ಬಾರಿ ಪ್ರಯತ್ನಿಸಿದರೂ ಮುಖ್ಯಮಂತ್ರಿಗಳು ಭೇಟಿಗೆ ಸಿಕ್ಕಿಲ್ಲ. ಆದ್ದರಿಂದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ನೀಡುತ್ತಿದ್ದೇವೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳ ಕಾರ್ಯದರ್ಶಿ ಕೈಯಲ್ಲೂ ಮನವಿ ನೀಡಿದ್ದೇವೆ ಎಂದು ಹೇಳಿದರು.
ದಿನ್ನೂರಿನಲ್ಲಿ ೭೧೧ ಎಕರೆ ಜಾಗ ಇತ್ತು. ರೈಲ್ವೆ ಇಲಾಖೆಗೆ ೨೭೮ ಎಕರೆ, ದೇವಸ್ಥಾನಕ್ಕೆ ಸುಮಾರು ೩ ಎಕರೆ, ರಸ್ತೆಗೆ ೧೩ ಎಕರೆ, ಇಂದಿರಾ ಕ್ಯಾಂಟೀನ್‌ಗೆ ೧೩ ಗುಂಟೆ, ದಿನ್ನೂರು ಕಾಲೊನಿಯಲ್ಲಿ ಮನೆ ಕಟ್ಟಲು ೨೦ ಎಕರೆ ಜಮೀನು ಕೊಟ್ಟಿದ್ದಾರೆ. ಸ್ಮಶಾನಕ್ಕೆ ಎರಡೂವರೆ ಎಕರೆ, ಬಡಾವಣೆ ಮಾಡಲು ೩೨ ಎಕರೆ ಕೊಟ್ಟಿದ್ದು, ಪೊಲೀಸ್ ಠಾಣೆಗೂ ನಾಲ್ಕೂವರೆ ಎಕರೆ ನೀಡಿದ್ದಾರೆ. ೧೨೫ ಎಕರೆಯಲ್ಲಿ ಕೃಷಿ ಕಾರ್ಯ ನಡೆದಿದೆ. ಇದರಲ್ಲಿ ಮೆಟ್ರೊಗೆ ೪೫ ಎಕರೆ ನೀಡಿದ್ದಾರೆ ಎಂದು ತಿಳಿಸಿದರು.
೧೯೫೦ರಲ್ಲೇ ಸರಕಾರ ಅಲ್ಲಿನ ರೈತರಿಗೆ ಜಾಗ ಮಂಜೂರು ಮಾಡಿತ್ತು. ಅಂದಿನಿಂದ ರೈತರು ಅಲ್ಲಿ ವ್ಯವಸಾಯ ಮಾಡುತ್ತ ಬಂದಿದ್ದರು ಎಂದ ಅವರು, ದಲಿತರ ಮೇಲೆ ಪ್ರಹಾರವನ್ನು ನಿಲ್ಲಿಸಬೇಕು. ಪೊಲೀಸರು ಬಂಧನ ಮಾಡಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದನ್ನೂ ತಪ್ಪಿಸಲಿ ಎಂದು ಹೇಳಿದರು. ಜಾಗ ತೆರವಿಗೆ ತಡೆಯಾಜ್ಞೆ ಇದೆ. ಆದರೂ, ತೆರವು ಮಾಡುವ ಪ್ರಯತ್ನ ಖಂಡನೀಯ ಎಂದು ತಿಳಿಸಿದರು.
ಪ್ರಕರಣ ಕೋರ್ಟಿನಲ್ಲಿದೆ ಎಂದು ಗಮನಕ್ಕೆ ತಂದರೆ, ಸರಕಾರ ತಮಗೆ ಟಾಸ್ಕ್ (ಕಾರ್ಯನಿಗದಿ) ನೀಡಿದೆ; ನಮ್ಮ ಕೆಲಸ ನಾವು ಮಾಡಿಯೇ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ ಎಂದು ಟೀಕಿಸಿದರು. ಕೆಐಎಡಿಬಿ ೧೯೮೨ರಲ್ಲಿ ರೈತರಿಂದ ಭೂಮಿ ಪಡೆದು ಪರಿಹಾರ ಕೊಟ್ಟಿತ್ತು ಎಂದು ಗಮನಕ್ಕೆ ತಂದರು.
ದಲಿತ ರೈತರು ಮಾತ್ರ ಕಾನೂನು ವ್ಯಾಪ್ತಿಯಡಿ ಬರುತ್ತಾರಾ- ಮುನಿಸ್ವಾಮಿ ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ ಸರಕಾರವು ದಲಿತ ರೈತರ ಜಮೀನು ತೆರವಿಗೆ ಮುಂದಾಗಿದೆ. ದೌರ್ಜನ್ಯ, ಹಲ್ಲೆ, ಸುಳ್ಳು ಪ್ರಕರಣ ದಾಖಲಿಸುತ್ತಿದ್ದು, ಇದು ಖಂಡನೀಯ ಎಂದು ತಿಳಿಸಿದರು. ಕೇವಲ ದಲಿತ ರೈತರು ಮಾತ್ರ ಕಾನೂನು ವ್ಯಾಪ್ತಿಯಡಿ ಬರುತ್ತಾರಾ ಎಂದು ಕೇಳಿದರು.
ಅದೆಲ್ಲವೂ ಅರಣ್ಯ ಇಲಾಖೆಗೆ ಸೇರಿದ್ದರೆ ರೈಲ್ವೆಗೆ ಕೊಟ್ಟ ಜಾಗವನ್ನೂ ತೆರವುಗೊಳಿಸಿ. ಕೆಐಎಡಿಬಿಗೆ ನೀಡಿದ ಜಾಗವನ್ನೂ ತೆರವುಗೊಳಿಸಬೇಕು. ಮೆಟ್ರೊ, ಪೊಲೀಸ್ ಠಾಣೆ ಮೊದಲಾದ ಉದ್ದೇಶಕ್ಕೆ ಕೊಟ್ಟಿರುವ ಜಾಗಗಳನ್ನು ತೆರವುಗೊಳಿಸಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಕೇಶವ್ ಪ್ರಸಾದ್, ಶಾಸಕ ಸಿಮೆಂಟ್ ಮಂಜುನಾಥ್, ಮಾಜಿ ಸಂಸದ ಎಸ್. ಮುನಿಸ್ವಾಮಿ, ಮಾಜಿ ಶಾಸಕರಾದ ವೈ. ಸಂಪಂಗಿ, ವೈ.ರಾಮಕ್ಕ, ಎಸ್. ಬಾಲರಾಜು
ಮತ್ತು ಮುಖಂಡರು ಉಪಸ್ಥಿತರಿದ್ದರು.