
ಪುತ್ತೂರು; ತಾಲೂಕಿನಲ್ಲಿ ಕಾಡಾನೆಯ ಉಪಟಳದಿಂದ ಕಂಗಾಲಾಗಿರುವ ಗ್ರಾಮೀಣ ಪ್ರದೇಶ ಕೊಳ್ತಿಗೆಗ್ರಾಮದ ಸುತ್ತಮುತ್ತಲಿರುವ ಕಾಡಿಗೆ ಸೋಲಾರ್ ತಂತಿಯ ಬೇಲಿ ಹಾಕುವ ಕಾರ್ಯ ನಡೆಯಲಿದೆ. ಆ ಮೂಲಕ ಆನೆದಾಳಿಯಿಂದ ಜನರು ಹಾಗೂ ಕೃಷಿಯನ್ನು ರಕ್ಷಿಸುವ ಕೆಲಸ ಆಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಅವರು ಭಾನುವಾರ ಕೊಳ್ತಿಗೆಯಲ್ಲಿ ನಡೆದ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ಕಾಡಾನೆ ಹಾವಳಿಯ ಕುರಿತು ಜನರು ಹಾಗೂ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಅವರು ಕಳೆದ ಕೆಲ ತಿಂಗಳಿನಿಂದ ಈ ಭಾಗದಲ್ಲಿ ಕಾಡಾನೆಗಳಿಂದ ಕೃಷಿ ಹಾನಿಯಾಗಿದೆ. ಇಲ್ಲಿನ ಜನತೆಯ ಬದುಕು ಕಿತ್ತುಕೊಳ್ಳುವ ಸ್ಥಿತಿ ಆನೆಗಳಿಂದ ನಿರ್ಮಿತವಾಗಿದೆ. ರಾತ್ರಿ-ಹಗಲು ಆನೆಗಳ ಸಮಸ್ಯೆಯಿಂದ ಇಲ್ಲಿ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಅರಣ್ಯ ಇಲಾಖೆಯಿಂದ ನಡೆಯುತ್ತಿದೆ. ಆದರೂ ಮತ್ತೆ ಆನೆಗಳ ಉಪಟಳ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟಿದ ಬಳಿಕ ಸೋಲಾರ್ ತಂತಿಯ ಬೇಲಿ ಹಾಕುವ ಕಾರ್ಯ ನಡೆಯಲಿದೆ ಎಂದರು.
ಕರ್ನಾಟಕ-ಕೇರಳ ಗಡಿಯಲ್ಲಿ ಕಾಡಿಗೆ ಸೋಲಾರ್ ತಂತಿಯ ಬೇಲಿ ಅಳವಡಿಕೆ ಮಾಡಲಾಗಿದೆ. ಇದರಿಂದ ಕಾಡಾನೆಗಳು ಮತ್ತೆ ವಾಪಾಸು ಹೋಗಲು ಸಾಧ್ಯವಾಗಿಲ್ಲ. ಇದರಿಂದ ಪದೇ ಪದೇ ಕೊಳ್ತಿಗೆ ಗ್ರಾಮದ ಭಾಗಕ್ಕೆ ಆನೆಗಳು ಧಾಳಿ ನಡೆಸುತ್ತಿವೆ. ಈ ಆನೆಗಳನ್ನು ಮತ್ತೆ ಕೇರಳ ಭಾಗದ ಕಾಡಿಗೆ ಅಟ್ಟುವ ಕೆಲಸ ನಡೆಯಬೇಕು ಎಂದು ಜನರು ಶಾಸಕರನ್ನು ಆಗ್ರಹಿಸಿದರು.
ಕೃಷಿನಾಶಕ್ಕೆ ಪರಿಹಾರ
೧೦ ವರ್ಷಕ್ಕಿಂತ ಮೇಲ್ಪಟ್ಟ ಅಡಿಕೆ ಮರ ನಾಶಕ್ಕೆ ರೂ.೪ ಸಾವಿರ, ೫ರಿಂದ ೬ ವರ್ಷದ ಗಿಡಕ್ಕೆ ರೂ.೧೫೦೦, ಸಣ್ಣಗಿಡಕ್ಕೆ ರೂ.೮೦೦, ಬಾಳೆಗಿಡಕ್ಕೆ ರೂ.೩೫೦ ಹಾಗೂ ಭತ್ತ ಕ್ವಿಂಟಾಲ್ ಗೆ ರೂ.೨೪೬ ಪರಿಹಾರ ಸರ್ಕಾರದಿಂದ ಸಿಗುತ್ತದೆ. ಆನೆದಾಳಿಯಿಂದ ಕೃಷಿನಷ್ಟವಾದವರು ತಕ್ಷಣ ಅರಣ್ಯ ಇಲಾಖೆ ಮೂಲಕ ಅರ್ಜಿ ಸಲ್ಲಿಸಿ ಅವರು ಅದನ್ನು ಆನ್ಲೈನ್ಗೆ ಹಾಕುತ್ತಾರೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ರಾತ್ರಿ ಪಹರೆಗೆ ೨೪ ಮಂದಿ
ಕೊಳ್ತಿಗೆ ಗ್ರಾಮದ ಭಾಗದಲ್ಲಿ ರಾತ್ರಿ ಪಹರೆಗಾಗಿ ೬ ತಂಡಗಳನ್ನು ಮಾಡಲಾಗಿದೆ. ಇದರಲ್ಲಿ ಒಟ್ಟು ೨೪ ಮಂದಿ ಸಿಬಂದಿಗಳು ಇರುತ್ತಾರೆ. ಈ ತಂಡಗಳು ರಾತ್ರಿ ಗ್ರಾಮದಲ್ಲಿ ಸುತ್ತಾಡುತ್ತಾರೆ. ಆನೆಗಳು ಕಂಡುಬಂದರೆ ಸೈರನ್ ಮೊಳಗಿಸುತ್ತಾರೆ. ಇದರಿಂದ ಜನರಿಗೆ ಜನರಿಗೆ ಜಾಗೃತಿ ಮೂಡಿಸುತ್ತಾರೆ. ಯಾರೂ ಆತಂಕಪಡಬೇಕಾಗಿಲ್ಲ ಎಂದು ಶಾಸಕರು ತಿಳಿಸಿದರು.
ಸಂಜೆಯಾದರೆ ಪೆರ್ಲಂಪಾಡಿ ಸ್ತಬ್ಧ
ಸಂಜೆಯಾಗುತ್ತಿದ್ದಂತೆ ಪೆರ್ಲಂಪಾಡಿ ಪೇಟೆ ಇಡೀ ಜನರಿಲ್ಲದೆ ಸ್ತಬ್ಧವಾಗಿ ಬಿಡುತ್ತದೆ. ಇದಕ್ಕೆ ಆನೆಗಳ ಭಯ ಕಾರಣವಾಗಿದೆ. ಯಾವ ಹೊತ್ತಿನಲ್ಲಿ ಆನೆಗಳು ದಾಳಿ ನಡೆಸುತ್ತವೆ ಎಂಬ ಭಯ ಜನರನ್ನು ಕಾಡುತ್ತಿದೆ. ಜೀವಭಯದಿಂದ ಇಲ್ಲಿ ಬದುಕುವಂತಾಗಿದೆ ಎಂದು ಸಭೆಯಲ್ಲಿ ಜನರು ಹೇಳಿದರು.
ಎಸಿಎಫ್ ಸುಬ್ಬ ನಾಯ್ಕ್ ಅವರು ಆನೆಗಳು ಸಮೂಹಜೀವಿಗಳಾಗಿದ್ದು, ಗುಂಪಿನಿಂದ ಹೊರಬಿದ್ದ ಆನೆಗಳು ನಾಡಿಗೆ ಬಂದು ತೊಂದರೆ ಕೊಡುತ್ತವೆ. ಏಕಾಏಕಿ ಅವುಗಳನ್ನು ಕಾಡಿಗೆ ಅಟ್ಟಲು ಸಾಧ್ಯವಿಲ್ಲ. ಆನೆಗಳು ಕಂಡುಬಂದಾಗ ನೀವಾಗಿ ಅದನ್ನು ಓಡಿಸಲು ಮುಂದಾಗುವುದು ಬೇಡ. ಒಂಟಿ ಆನೆಗಳು ಹೆಚ್ಚು ಅಪಾಯಕಾರಿ. ಹಾಗಾಗಿ ಇಲಾಖೆಯ ಗಮನಕ್ಕೆ ತನ್ನಿ. ಇಲಾಖೆ ಬಳಿ ಆನೆಗಳನ್ನು ಓಡಿಸಲು ಆಯುಧಗಳಿವೆ ಎಂದರು. ಸ್ಥಳೀಯರಾದ ಲೋಕೇಶ್ ಪೆರ್ಲಂಪಾಡಿ, ಕಂಟ್ರಮಜಲು ನಿವಾಸಿ ಕಸ್ತೂರಿ ಆನೆಗಳ ಸಮಸ್ಯೆ ಬಗ್ಗೆ ಮಾತನಾಡಿದರು.
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಅರಣ್ಯ ಸಂರಕ್ಷಣಾಧಿಕಾರಿ
ಕಿರಣ್, ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಸ್ವಾಗತಿಸಿ, ಸದಸ್ಯ ಪವನ್ ವಂದಿಸಿದರು.