
ಕಲಬುರಗಿ :ಜೂ.22: ಆಧುನಿಕ ಕಾಲದ ಒತ್ತಡದ ಬದುಕಿನಲ್ಲಿ ಮಾನವ ಇಂದು ತನ್ನ ಜೀವನ ಸಾಗಿಸುತ್ತಿದ್ದು, ಶಾಂತಿ. ಸಮಾದಾನ, ನೆಮ್ಮದಿ ಇಲ್ಲದಂತಾಗಿದೆ. ಸುಮಧುರವಾದ ಸಂಗೀತವನ್ನು ಆಲಿಸುವದರಿಂದ ಮಾನಸಿಕ ಒತ್ತಡದಿಂದ ಮುಕ್ತಗೊಳಿಸಿ, ಮನಸಿಗೆ ನೆಮ್ಮದಿ ದೊರೆಯತ್ತದೆ. ರೋಗವನ್ನು ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕಿದೆಯೆಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದ್ದು ಸಂಗೀತದ ಮಹತ್ವ ತೋರಿಸುತ್ತದೆ ಎಂದು ಖ್ಯಾತ ಗಾಯಕ ಕಲಾವಿದ ಶರಣು ಕಾಂಬಳೆ ಅಭಿಮತಪಟ್ಟರು.
ನಗರದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ‘ಗಾನಗಂಧರ್ವ ಸಂಗೀತ ಪಾಠಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಭಾನುವಾರ ಜರುಗಿದ ‘ವಿಶ್ವ ಸಂಗೀತ ದಿನಾಚರಣೆ’ಯನ್ನು ಹಾರ್ಮೋನಿಯಂ ನುಡಿಸಿ, ಗೀತೆಯನ್ನು ಹಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಸಂಗೀತ ಕಲಾವಿದ ಹಣಮಂತರಾಯ ಮಂಗಾಣೆ ಮಾತನಾಡಿ, ಪ್ರಾಚೀನ ಕಾಲದಿಂದಲೂ ಸಂಗೀತವು ನಮ್ಮ ಸಂಸ್ಕøತಿಯ ಒಂದು ಭಾಗವಾಗಿ ಕಂಡು ಬರುತ್ತಿದೆ. ಹಿಂದಿನ ದಿನಗಳಲ್ಲಿ ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹಾಡಿ, ಸಂತೋಷಗೊಳಿಸುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ ಇವೆಲ್ಲಾ ಮಾಯವಾಗುತ್ತಿವೆ. ನಮ್ಮ ಭಾಗದಲ್ಲಿ ಅನೇಕ ಜನ ಪ್ರತಿಭಾವಂತ ಸಂಗೀತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಪ್ರೋತ್ಸಾಹಿಸಿದರೆ, ಅವರು ಸಮಾಜಕ್ಕೆ ಹೆಚ್ಚಿನ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ್, ಸಂಗೀತ ಕಲಾವಿದರಾದ ಶೃತಿ, ಸ್ವಾತಿ, ಪ್ರಮುಖರಾದ ಶಿವಶರಣಪ್ಪ ಉಳಾಗಡ್ಡಿ, ಅಂಬಾರಾಯ ದುದಗಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ನಂತರ ಇದೇ ಸಂಗೀತ ಕಲಾವಿದರಿಂದ ಸಂಗೀತೋತ್ಸವ ಜರುಗಿತು.