ನಿರಂತರ ಅಧ್ಯಯನ ಉನ್ನತ ಸಾಧನೆ, ವ್ಯಕ್ತಿತ್ವಕ್ಕೆ ಪೂರಕ

ಕಲಬುರಗಿ:ಜೂ.19: ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ಶ್ರೇಷ್ಠ ಗ್ರಂಥಗಳಿವೆ. ಪುಸ್ತಕಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಉನ್ನತ ಸಾಧನೆ, ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಆದ್ದರಿಂದ ವಿವಿಧ ಬಗೆಯ ಉತ್ತಮ ಪುಸ್ತಕಗಳು, ಪತ್ರಿಕೆಗಳನ್ನು ಓದುವ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಹೊಸ ಜೇವರ್ಗಿ ರಸ್ತೆಯಲ್ಲಿನ ‘ಗೆಟ್ಸ್ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ರಾಷ್ಟ್ರೀಯ ಓದು ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಇದು ಯಾರಿಂದಲೂ ಕಳ್ಳತನ ಮಾಡಲಾಗದ ಸಂಪತ್ತಾಗಿದೆ. ಇಂತಹ ಅಮೂಲ್ಯವಾದ ಸಂಪತ್ತನ್ನು ಪ್ರತಿಯೊಬ್ಬರು ಪಡೆಯಬೇಕಾದರೆ ಸದಾ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶ್ರೇಷ್ಠ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ನಾವು ಹೆಚ್ಚು ಓದಿದಷ್ಟು ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗಿ ವ್ಯಕ್ತಿ, ಶಕ್ತಿಯಾಗುತ್ತಾನೆ. ವಿಶೇಷವಾಗಿ ಯುವಕರು ಉತ್ತಮ ಗ್ರಂಥಗಳ ಅಧ್ಯಯನದತ್ತ ಚಿತ್ತಹರಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ಒತ್ತಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಳ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಕೆ ಅಥವಾ ಪ್ರಮಾಣ ಪತ್ರಕ್ಕಾಗಿ ಅಧ್ಯಯನ ಮಾಡಿದರೆ ಸಾಲದು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು. ಪುಸ್ತಕ ಓದುವದರಿಂದ ಶ್ರೇಷ್ಠ ಸಂಸ್ಕøತಿ, ಕಲೆ, ಸಾಹಿತ್ಯ, ಮಾನವೀಯ ಮೌಲ್ಯಗಳು ತಿಳಿಯುತ್ತವೆ. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪುಸ್ತಕಗಳು ಪ್ರೇರಣೆಯನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ರಾಜಶೇಖರ ಪಾಟೀಲ್, ಕಾಲೇಜಿನ ಉಪನ್ಯಾಸಕ ಶಿವಲಿಂಗಪ್ಪ ತಳವಾರ, ಭರತ ಮಾಗೊಂಡ್, ಅಶ್ವಿನ್, ಸಾಹೇಬಲಾಲ್ ಸೇರಿದಂತೆ ಇನ್ನಿತರರಿದ್ದರು.