
ಬೀದರ್:ಜೂ.೧೮: ಆರೋಗ್ಯಪೂರ್ಣ ಜೀವನಕ್ಕೆ ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಹೇಳಿದರು.
ಸೂರ್ಯ ನಮಸ್ಕಾರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡ ಯೋಗ ಸಪ್ತಾಹವನ್ನು ಮಂಗಳವಾರ ಸಸಿಗೆ ನೀರೆರೆದು ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಒಂದು ತಾಸು ಯೋಗಕ್ಕೆ ಮೀಸಲಿಟ್ಟರೆ, ಇಡೀ ದಿನ ಉತ್ಸಾಹದಿಂದ ಕಳೆಯಬಹುದು. ಮನಸ್ಸನ್ನು ಉಲ್ಲಸಿತಗೊಳಿಸುವ ಶಕ್ತಿ ಯೋಗಕ್ಕೆ ಇದೆ ಎಂದು ತಿಳಿಸಿದರು.
ಇಂದಿನ ಒತ್ತಡದ ಜೀವನದಲ್ಲಿ ಮಾನಸಿಕ ಶಾಂತಿ ಹಾಗೂ ನೆಮ್ಮದಿ ಕಾಪಾಡಲು ಯೋಗ ಸಹಕಾರಿಯಾಗಿದೆ ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಹೇಳಿದರು.
ಯೋಗದಿಂದ ಆರೋಗ್ಯಕ್ಕೆ ಅನೇಕ ಅನುಕೂಲಗಳಿವೆ. ಏಕಾಗ್ರತೆ ಕಾಯ್ದುಕೊಳ್ಳಲೂ ಸಾಧ್ಯವಾಗುತ್ತದೆ. ಹೀಗಾಗಿ ಯೋಗವನ್ನು ದೈನಂದಿನ ಜೀವನ ಭಾಗವಾಗಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಯೋಗ ಸಪ್ತಾಹವನ್ನು ರೋಟರಿ ಕ್ಲಬ್ ಆಫ್ ಬೀದರ್, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್, ಲಘು ಉದ್ಯೋಗ ಭಾರತಿ ಹಾಗೂ ಗ್ಲೋಬಲ್ ಫ್ರೆಂಡ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಸಪ್ತಾಹ ಅಂಗವಾಗಿ ಆಶ್ರಮದಲ್ಲಿ ಒಂದು ವಾರ ಪ್ರತಿ ದಿನ ಬೆಳಿಗ್ಗೆ ೬ ರಿಂದ ೭.೩೦ ರ ವರೆಗೆ ಪುರುಷರು, ಮಹಿಳೆಯರಿಗೆ ಹಾಗೂ ಸಂಜೆ ೫.೩೦ ರಿಂದ ೬.೩೦ ರ ವರೆಗೆ ಮಹಿಳೆಯರಿಗೆ ಯೋಗ ಹೇಳಿಕೊಡಲಾಗುವುದು ಎಂದು ಹೇಳಿದರು.
ಸತ್ಯಪ್ರಕಾಶ, ಶಿವಲೀಲಾ ಚಿದ್ರೆ ಹಾಗೂ ಡಾ. ಲೋಕೇಶ ಹಿರೇಮಠ ಯೋಗದ ವಿವಿಧ ಪ್ರಕಾರಗಳನ್ನು ಹೇಳಿಕೊಟ್ಟರು.
ಸೂರ್ಯ ನಮಸ್ಕಾರ ಸಂಘದ ಕಾರ್ಯದರ್ಶಿ ಶಿವಕುಮಾರ ಪಾಟೀಲ, ನಿತಿನ್ ಕರ್ಪೂರ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಪ್ರಭು ತಟಪಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್ ಅಧ್ಯಕ್ಷ ಗುಂಡಪ್ಪ ಘೋದೆ, ಕಾರ್ಯದರ್ಶಿ ಡಾ. ಉಲ್ಲಾಸ್ ಕಟ್ಟಿಮನಿ, ರೋಟರಿ ಕ್ಲಬ್ ಆಫ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ, ಕಾರ್ಯದರ್ಶಿ ಕೃಪಾಸಿಂಧು, ಲಘು ಉದ್ಯೋಗ ಭಾರತಿ ಅಧ್ಯಕ್ಷ ಸಚ್ಚಿದಾನಂದ ಚಿದ್ರೆ, ಗ್ಲೊಬಲ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಶರಣು ಚಳಕಾಪುರೆ, ಕಾರ್ಯದರ್ಶಿ ಜಗನ್ನಾಥ ರೆಡ್ಡಿ ಮತ್ತಿತರರು ಇದ್ದರು.