ಗುರು ನಾನಕ ಶಾಲೆಯಲ್ಲಿ ಪೈಲೆಟ್ ಪೂಜಾಗೆ ಸನ್ಮಾನ

ಬೀದರ:ಜೂ.14:ಗುರು ನಾನಕ ಶಾಲೆಯ ಹಳೆ ವಿದ್ಯಾರ್ಥಿ 2015 ರ ಬ್ಯಾಚ್‍ನ ಪೂಜಾ ಸದಾಂಗಿ ಅವರಿಗೆ ಶುಕ್ರವಾರ ಸಂಸ್ಥೆಯ ಉಪಾಧ್ಯಕ್ಷೆ ಡಾ|| ರೇಷ್ಮಾ ಕೌರ್ ಅವರು ಶುಭ ಹಾರೈಸಿ ಸನ್ಮಾನಿಸಿದರು.

ಅವರು ಮುಂದುವರೆದು ಮಾತನಾಡುತ್ತ ಪೂಜಾ ಸದಾಂಗಿ ಬೀದರ ಜಿಲ್ಲೆಗೆ ಮೊದಲ ಮಹಿಳಾ ಪೈಲೆಟ್ ಆಗಿ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಇನ್ಮೂಂದೆಯೂ ಹೆಚ್ಚಿನ ಎತ್ತರಕ್ಕೆ ಬೆಳೆಯಿರಿ ಎಂದು ಹೇಳಿದರು. ಪೂಜಾ ಅವರು ನಮ್ಮ ಶಾಲೆಯಲ್ಲಿ ನರ್ಸರಿ ತರಗತಿಯಿಂದ ಹತ್ತನೇ ತರಗತಿಗೆ ಓದಿದ್ದರು. ನಮ್ಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಐಪಿಎಸ್, ಐಎಎಸ್ ಮತ್ತು ಇತರರೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡುತ್ತಿರುವುದು ಗಮನಾರ್ಹ ಎಂದು ನುಡಿದರು.
ವಿದ್ಯಾರ್ಥಿಗಳು ಯಾವಾಗಲು ಕಷ್ಟಪಟ್ಟು ಓದಬೇಕು, ಎಲ್ಲಾ ರೀತಿಯ ಸವಾಲುಗಳನ್ನು ಸ್ವಿಕರಿಸಿ ಅದಕ್ಕೆ ತಕ್ಕ ಉತ್ತರವನ್ನು ಕಂಡುಹಿಡಿಯಬೇಕು, ಜೀವನದಲ್ಲಿ ಯಾವುದು ಸುಲಭವಾಗಿ ಸಿಗುವುದಿಲ್ಲ. ಪ್ರಮಾಣಿಕ ಮತ್ತು ಕಠಿಣ ಪರಿಶ್ರಮಪಟ್ಟರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪೈಲೆಟ್ ಪೂಜಾ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತ ಹಳೆ ಶಿಕ್ಷಕರ ವೃಂದದವರನ್ನು ನೆನಪಿಸಿಕೊಳ್ಳುತ್ತ ಶಿಕ್ಷಕರು ಕೊಟ್ಟ ಮಾರ್ಗದರ್ಶನ ಮತ್ತು ಬುನಾದಿಪಾಯ ಚೆನ್ನಾಗಿ ಹಾಕಿಕೊಟ್ಟಿತ್ತು. ಇದರ ಜೊತೆಗೆ ಪೋಷಕರ, ಶಿಕ್ಷಕರ ಹಾಗೂ ತನ್ನ ಕಠಿಣ ಪರಿಶ್ರಮ ಕಾರಣವಾಗಿದೆ. ತಮ್ಮ ಈ ಸಾಧನೆಗೆ ಸನ್ಮಾನಿಸಿ ಗೌರವಿಸುತ್ತಿರುವುದು ನನಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ. ಈ ಶಾಲೆಯಲ್ಲಿ ಶಿಕ್ಷಕರು ನೀಡುತ್ತಿರುವ ಗುಣಮಟ್ಟದ ಶಿಕ್ಷಣವೆ ಇದಕ್ಕೆ ಸಾಕ್ಷಿಯಾಗಿದೆ. ಯಾವುದರಲ್ಲಿ ನಿಮಗೆ ಆಸಕ್ತಿ ಇರುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಮುನ್ನಡೆದರೆ ಯಶಸ್ಸು ಖಂಡಿತ ಸಿಗುತ್ತದೆ. ಗಂಡು ಹೆಣ್ಣು ಎಂಬ ಭೇದಭಾವ ಮರೆದು ಈಗ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಮುಂದೆಯಿದ್ದಾರೆ. ನಾನು ಹೆಣ್ಣು ಮಗಳು ಎಂಬ ಕಾರಣದಿಂದ ಏನೂ ಆಗಲ್ಲ ಎಂಬ ಭಾವನೆ ದೂರವಾಗಿಸಿ ಗುರಿ ಇಟ್ಟುಕೊಂಡು ಮುನ್ನಡೆದರೆ ಏನೂ ಬೇಕಾದರೂ ಸಾಧನೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.