ಸಾಹಿತ್ಯ ಓದುವ ಆಸಕ್ತಿ ಬೆಳೆಸಿಕೊಳ್ಳಿ

ಬೀದರ್: ಜೂ.೧೧: ಕನ್ನಡ ಸಾಹಿತ್ಯದ ಅಭಿವೃದ್ಧಿಗೆ ಎಲ್ಲರೂ ಪುಸ್ತಕ ಓದುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ವತಿಯಿಂದ ನಗರದ ಗೌರಿಶಂಕರ ಹೋಟೆಲ್ ಸಭಾಂಗಣದಲ್ಲಿ ಈಚೆಗೆ ನಡೆದ ಸಾಹಿತಿ ವೀರೇಶ್ವರಿ ಮೂಲಗೆ ರಚಿತ ಅರಳಿದ ಸುಮ ಕಾದಂಬರಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.
ಯುವ ಸಾಹಿತಿಗಳು ಒಂದೇ ಪ್ರಕಾರದ ಸಾಹಿತ್ಯಕ್ಕೆ ಸೀಮಿತರಾಗಬಾರದು. ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಬೇಕು. ರಾಜ್ಯಮಟ್ಟದಲ್ಲಿ ಹೆಸರು ಗಳಿಸಬೇಕು ಎಂದು ಪುಸ್ತಕ ಬಿಡುಗಡೆಗೊಳಿಸಿದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.
ವೀರೇಶ್ವರಿ ಮೂಲಗೆ ಉತ್ತಮ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕಾದಂಬರಿ, ಕಥೆ, ಗಜಲ್ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಉತ್ತಮ ಸಾಹಿತಿಯಾಗಿ ಹೊರ ಹೊಮ್ಮಲು ಸಾಹಿತ್ಯ ಪರಂಪರೆಯ ಅಧ್ಯಯನ ಬಹಳ ಅವಶ್ಯಕವಾಗಿದೆ ಎಂದು ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಹೇಳಿದರು.
ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಹಿರಿದಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಭಾರತಿ ವಸ್ತ್ರದ್ ತಿಳಿಸಿದರು.
ಔರಾದ್ ತಹಶೀಲ್ದಾರ್ ಮಹೇಶ ಪಾಟೀಲ ಮಾತನಾಡಿದರು. ಕಾದಂಬರಿ ಲೇಖಕಿ ವೀರೇಶ್ವರಿ ಮೂಲಗೆ ತಮ್ಮ ಅನುಭವಗಳನ್ನು ಹಂಚಿಕೊAಡರು. ಡಾ. ಶ್ರೇಯಾ ಮಹೇಂದ್ರಕರ್ ಕಾದಂಬರಿ ಪರಿಚಯ ಮಾಡಿಕೊಟ್ಟರು.
ವಿವಿಧ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಮೇಶ ಬಿರಾದಾರ, ಸಂತೋಷಕುಮಾರ ಜೋಳದಾಪಕೆ, ಸುಶೀಲ್ ಮೊಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಜಗದೇವಿ ದುಬಲಗುಂಡೆ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ಮೊಟ್ಟಿ, ವಿಶಾಲ್ ಮೊಟ್ಟಿ, ಸುಶೀಲ್ ಮೊಟ್ಟಿ, ಅಮರ ದುರ್ಗೆ ಉಪಸ್ಥಿತರಿದ್ದರು.
ಡಾ. ರಮೇಶ ಮೂಲಗೆ ಸ್ವಾಗತಿಸಿದರು. ಮಹೇಶ ಮಜಗೆ ನಿರೂಪಿಸಿದರು. ಪುಷ್ಪ ಕನಕ ವಂದಿಸಿದರು.