ಶಾರದಾ ವಿದ್ಯಾಲಯದಲ್ಲಿ ಶೈಕ್ಷಣಿಕ ಕಾರ್ಯಗಾರ ಆಯೋಜನೆ

ಮಂಗಳೂರು ನಗರದ ಕೊಡಿಯಾಲಬೈಲಿನ ಶಾರದಾ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಗಾರವು ವಿದ್ಯಾಲಯದ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಎಪ್ಪತ್ತೈದು ವರ್ಷಗಳಿಂದ ಸಂಶೋಧನೆ ಹಾಗೂ ಅಮೂಲ್ಯ ಕೃತಿಗಳ ಪ್ರಕಟನೆಯಲ್ಲಿ ತೊಡಗಿಕೊಂಡಿರುವ ದೇಶದಾದ್ಯಂತ ಅನೇಕ ಶಾಖೆಗಳನ್ನು ಹೊಂದಿರುವ ನವದೆಹಲಿಯ ದರಿಯಾಗಂಜ್‌ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ನ್ಯೂ ಸರಸ್ವತಿ ಹೌಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಶಾರದಾ ಸಮೂಹ ಸಂಸ್ಥೆಗಳ ಶಿಕ್ಷಕರ ಬಳಗಕ್ಕೆ ಈ ಕಾರ್ಯಗಾರವನ್ನು ಆಯೋಜಿಸಿತ್ತು. ಅಧ್ಯಯನ ಮತ್ತು ಅಧ್ಯಾಪನ ಕಾರ್ಯದಲ್ಲಿ ಎರಡು ದಶಕಗಳ ಕಾಲದ ಅನುಭವವನ್ನು ಪಡೆದಿರುವ ಪ್ರಖ್ಯಾತ ಶಿಕ್ಷಕ ತರಬೇತುದಾರರಾದ ಡಾ| ನಿಶಾ ಸಿಂಗ್ ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ೨೧ನೇ ಶತಮಾನದ ಕೌಶಲ್ಯಗಳನ್ನು ತರಗತಿಯ ಪಾಠ ಭೋಧನೆಯಲ್ಲಿ ಅಳವಡಿಸಿಕೊಳ್ಳುವುದು ಹೇಗೆ? ಮತ್ತು ಶಿಕ್ಷಕರಿಗೆ ಇರಬೇಕಾದ ಅರ್ಹತೆಗಳು ಎಂಬ ವಿಷಯದಲ್ಲಿ ಡಾ| ನಿಶಾ ಸಿಂಗ್ ಅತ್ಯಂತ ಪ್ರಭಾವಪೂರ್ಣ ಶೈಲಿಯಲ್ಲಿ ತರಗತಿಯನ್ನು ನಡೆಸಿಕೊಟ್ಟರು.
ಶಾರದಾ ವಿದ್ಯಾಲಯದ ನೂತನ ಪ್ರಾಂಶುಪಾಲೆ ಶ್ರೀಮತಿ ಚಂದ್ರಿಕಾ ಭಂಡಾರಿ, ಆಡಳಿತ ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್, ಉಪ- ಪ್ರಾಂಶುಪಾಲರುಗಳಾದ ಶ್ರೀಮತಿ ಲಕ್ಷ್ಮೀ ಉಡುಪ, ಶ್ರೀಮತಿ ಕೆ. ಲಕ್ಷ್ಮೀ ಪೈ ಕಾರ್ಯಗಾರ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ವಿದ್ಯಾಲಯದ ಸಂಗೀತ ಶಿಕ್ಷಕಿ ಶ್ರೀಮತಿ ರಜನಿ ಶೆಣೈ ಪ್ರಾರ್ಥನೆ ಹಾಡಿದರು. ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಸ್ವಾಗತಗೈದರು. ಅಧ್ಯಾಪಿಕೆ ಶ್ರೀಮತಿ ಸ್ಮಿತಾ ನಾಯರ್ ಕಾರ್ಯಕ್ರಮ ನಿರ್ವಹಣೆಗೈದು ವಂದನಾರ್ಪಣೆಯಿತ್ತರು. ಕಾರ್ಯಗಾರದ ಸಮಾರೋಪದ ಹಂತದಲ್ಲಿ ಆಗಮಿಸಿದ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎಂ.ಬಿ.ಪುರಾಣಿಕರು ನೂತನ ಶೈಕ್ಷಣಿಕ ವರ್ಷಕ್ಕೆ ಶಿಕ್ಷಕರನ್ನು ಸ್ವಾಗತಿಸುತ್ತಾ ವಿದ್ಯಾ ಸಂಸ್ಥೆಯ ಸ್ಥಾಪನೆಯ ಧ್ಯೇಯೋದ್ದೇಶ ಹಾಗೂ ಮುಂದಿನ ಯೋಜನೆಗಳನ್ನು ವಿವರಿಸಿದರು. ಪ್ರಸಕ್ತ ಸನ್ನಿವೇಶದಲ್ಲಿ ಶಿಕ್ಷಕರು ರೂಡಿಸಿಕೊಳ್ಳಬೇಕಾದ ಸಾಮರ್ಥ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಪ್ರಸ್ತಾಪಿಸಿ ಕಾರ್ಯಗಾರಕ್ಕೆ ಶುಭ ಕೋರಿದರು. ಶಾಂತಿ ಮಂತ್ರದೊಂದಿಗೆ ಶೈಕ್ಷಣಿಕ ಕಾರ್ಯಗಾರ ಶುಭ ಸಮಾಪ್ತಿಗೊಂಡಿತು.