ಅನಧಿಕೃತ ಕೋಚಿಂಗ್ ಕೇಂದ್ರಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೀದರ್: ಮೇ.28: ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಬೆಂಗಳೂರಿನಲ್ಲಿ ಮಂಗಳವಾರ ಈ ಕುರಿತು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಫಿಜಿಕ್ಸ್‍ವಾಲಾ ವಿದ್ಯಾಪೀಠ ಪಾಠಶಾಲಾ ಕೋಚಿಂಗ್ ಕೇಂದ್ರದ ಹೆಸರಲ್ಲಿ ಹಣ ಪಡೆದು ಅನಧಿಕೃತವಾಗಿ ಬೇರೆ ಬೇರೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಸಿ, ಆನ್‍ಲೈನ್, ಆಫ್‍ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ. ಬನ್ಸಾಲ್ ಹಾಗೂ ಆಕಾಶ್ ಕೋಚಿಂಗ್ ಕೇಂದ್ರಗಳಿಂದಲೂ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಧಿಕೃತ ಕಾಲೇಜುಗಳಲ್ಲೂ ನೀಟ್, ಜೆಇಇ, ಕೆಸಿಇಟಿ ಹೆಸರಲ್ಲಿ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ಪಡೆಯಲಾಗುತ್ತಿದೆ. ಹೀಗಾಗಿ ಪಾಲಕರಿಗೆ ಮಕ್ಕಳ ಕಾಲೇಜು ಶಿಕ್ಷಣ ಹೊರೆಯಾಗಿದೆ ಎಂದು ಹೇಳಿದ್ದಾರೆ.
ಕೋಚಿಂಗ್ ಕೇಂದ್ರಗಳ ಬಗ್ಗೆ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳೂ ಕೋಚಿಂಗ್ ಕೇಂದ್ರಗಳ ಜತೆ ಕೈಜೋಡಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಕೂಡಲೇ ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಬೇಕು. ವಿದ್ಯಾರ್ಥಿಗಳು ಅಧಿಕೃತ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.