ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಮೇ.22:- ಅಂಕನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆ ನಡೆಸುತ್ತಿರುವ ಶಿಕ್ಷಕರು ಕೆಲವರ ಮಾಹಿತಿಯನ್ನು ಸಮೀಕ್ಷೆಯಲ್ಲಿ ತಪ್ಪಾಗಿ ನಮೂದಿಸುತ್ತಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮರು ಜಾತಿ ಗಣತಿ ಸಮೀಕ್ಷೆ ನಡೆಸುವಂತೆ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಅಂಕನಹಳ್ಳಿ ಗ್ರಾಮದಲ್ಲಿ ಶಿಕ್ಷಕ ಕುಮಾರ್ ಅವರು ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆ ವೇಳೆ ಕೆಲ ಕುಟುಂಬದ ಮಾಹಿತಿ ತಪ್ಪಾಗಿ ನಮೂದಿಸಿರುವ ಬಗ್ಗೆ ವಿಷಯ ತಿಳಿದ ಪ್ರಗತಿಪರ ಸಂಘಟನೆಗಳ ಮುಖಂಡರು ಅಂಕನಹಳ್ಳಿ ಗ್ರಾಮಕ್ಕೆ ಆಗಮಿಸಿ ಪರಿಶಿಷ್ಟ ಜಾತಿ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದುಕೊಂಡ ವೇಳೆ ಶಿಕ್ಷಕ ಕುಮಾರ್ ಅವರು ಮಾಹಿತಿ ತಪ್ಪಾಗಿ ನಮೂದಿಸಿರುವುದು ಕಂಡು ಬಂದಿದೆ ಈ ವೇಳೆ ಶಿಕ್ಷಣ ಇಲಾಖೆ ಮೇಲಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮುಖಂಡರ ಮನವೊಲಿಸಲು ಪ್ರಯತ್ನಿಸಿದರು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ದಸಂಸ ಮುಖಂಡರಾದ ಐಲಾಪುರ ರಾಮು ಮಾತನಾಡಿ ಮುಂದಿನ ಪೀಳಿಗೆಯ ಭವಿಷ್ಯದ ಹಿತ ದೃಷ್ಟಿಯಿಂದ ಸರ್ಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿ ಜನಗಣತಿ ಸಮೀಕ್ಷೆ ವೇಳೆ ಉಪಜಾತಿ ನಮೂದಿಸಬೇಕು ಇದರಿಂದ ನಮ್ಮ ಸಂಖ್ಯಾಬಲ ದೊರೆಯುವುದಲ್ಲದೆ ಸರ್ಕಾರದಿಂದ ಹಿಂದುಳಿದ ಜನರಿಗೆ ದೊರೆಯುವ ಸವಲತ್ತುಗಳನ್ನು ಪಡೆಯಲು ಸಹಾಯವಾಗಲಿದೆ ಆದರೆ ಶಿಕ್ಷಕ ಕುಮಾರ್ ಜನಗಣತಿ ಸಮೀಕ್ಷೆ ವೇಳೆ ಉಪಜಾತಿ ನಮೂದಿಸದೆ ಸಮುದಾಯದವರಿಗೆ ಅವಮಾನಿಸಿದ್ದಾರೆ ಈ ವೇಳೆ ಗ್ರಾಮದ ವಾಲೆಂಟರ್ಸ್ ಸರಿ ಮಾಹಿತಿ ನೀಡಿದರು ಅದನ್ನು ಪರಿಗಣಿಸದೆ ಉದ್ದೇಶಪೂರ್ವಕವಾಗಿ ಕುಮಾರ್ ಅವರು ತಪ್ಪು ಮಾಹಿತಿ ನಮೂದಿಸಿರುವುದು ಕಂಡುಬಂದಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಗ್ರಾಮದಲ್ಲಿ ಮತ್ತೆ ಮರು ಜಾತಿ ಗಣತಿ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಪುರಸಭಾ ಸದಸ್ಯರು ಹಾಗೂ ದಸಂಸ ಮುಖಂಡರಾದ ತಮ್ಮಣ್ಣಯ್ಯ ಮಾತನಾಡಿ ಅಂಕನಹಳ್ಳಿ ಗ್ರಾಮದಲ್ಲಿ ಕಳೆದ 12 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ಮನೆಗಳ ಪರಿಚಯವಿದೆ ಆದರೂ ಜಾತಿಗಣತಿ ಸಮೀಕ್ಷೆ ವೇಳೆ ಕೆಲ ಕುಟುಂಬಗಳ ಉಪಜಾತಿ ನಮೂದಿಸದೆ ಅನ್ಯಾಯ ಮಾಡಿರುವುದು ಉದ್ದೇಶಪೂರ್ವಕವಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ತಮಗೆ ಮಾಹಿತಿ ಗೊತ್ತಿಲ್ಲವೆಂದರೆ ಮೇಲಧಿಕಾರಿಗಳಿಂದ ತಿಳಿದುಕೊಳ್ಳಬಹುದು ಆ ಕೆಲಸ ಸಹ ಮಾಡದೆ ಏಕ ಪಕ್ಷಿಯ ನಿರ್ಧಾರ ಕೈಗೊಂಡು ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಈಗ ನಡೆದಿರುವ ಸಮೀಕ್ಷೆ ಬಗ್ಗೆ ನಮಗೆ ಅನುಮಾನವಿದ್ದು ಮರು ಜಾತಿ ಗಣತಿ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದರು.
ಈ ಸಂದರ್ಭ ದಲಿತ ಮುಖಂಡರಾದ ಗೋಪಾಲ್, ನವಿಲೂರು ಮಹದೇವ್, ಪ್ರಕಾಶ್, ಚನ್ನಬಸವ, ತಿಮಕಾಪುರ ಮಹದೇವ್, ಶಿವಣ್ಣ, ಜಗದೀಶ್ ಮತ್ತಿತರಿದ್ದರು.