ಬಸವ ನೆಲದ ಜನಾಶಯದಂತೆ ನಡೆದಿದ್ದೇನೆ: ಸಚಿವ ಶಿವಾನಂದ

ಕೊಲ್ಹಾರ :ಮೇ.21: ತಿಕೋಟಾ ಕ್ಷೇತ್ರದಿಂದ ಪಕ್ಷ-ಕ್ಷೇತ್ರ ಬದಲಿಸಿ ಇಲ್ಲಿಗೆ ಬಂದ ನನ್ನನ್ನು ಬಸವನಬಾಗೇವಾಡಿ ಕ್ಷೇತ್ರದ ಜನರು ಅಭಿಮಾನ, ಪ್ರೀತಿಯಿಂದ ಗೆಲ್ಲಿಸಿದರು. ಕ್ಷೇತ್ರದ ಜನಾಶಯಕ್ಕೆ ತಕ್ಕಂತೆ ನಾನು ಕೊಲ್ಹಾರ, ನಿಡಗುಂದಿ ಸೇರಿದಂತೆ ಇಡೀ ಬಸವನ ಬಾಗೇವಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದರೂ ಪ್ರಚಾರ ಪಡೆಯಲಿಲ್ಲ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಮೇ 23 ರಂದು ಕೊಲ್ಹಾರ ಪಟ್ಟಣಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮಾಡಲಿರುವ ಹಿನ್ನೆಲೆಯಲ್ಲಿ
ಮಂಗಳವಾರ ರಾತ್ರಿ ಕೊಲ್ಹಾರ ಪಟ್ಟಣದ ಸಮುದಾಯ ಭವನದಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಸವನಬಾಗೇವಾಡಿ ಕ್ಷೇತ್ರದಿಂದ ಗೆದ್ದು ಕೊಲ್ಹಾರ ಪಟ್ಟಣಕ್ಕೆ ಬಂದಾಗ ಕೃಷ್ಣಾ ನದಿಯಲ್ಲಿ ಕೇವಲ 13 ಕಂಬ ನಿಂತಿದ್ದವು. ಇದನ್ನರಿತ ನಾನು ರಾಜಕೀಯ ಇಚ್ಛಾಶಕ್ತಿ ಹಾಗೂ ಅಭಿವೃದ್ಧಿ ವಿಷಯದಲ್ಲಿನ ಬದ್ಧತೆಯಿಂದ ತ್ವರಿತವಾಗಿ ಸೇತುವೆ ನಿರ್ಮಿಸಿ, ಬಾಗಲಕೋಟೆ, ವಿಜಯಪುರ ಭಾಗದ ಮೂಲಕ ಉತ್ತರ-ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದೆ ಎಂದು ಹಳೆಯ ಸಂಗತಿಗಳನ್ನು ಮೆಲುಕು ಹಾಕಿದರು.
ಒಂದೊಮ್ಮೆ ಅಂದು ಸೇತುವೆ ನಿರ್ಮಿಸದಿದ್ದರೆ ಕೊಲ್ಹಾರ ಪಟ್ಟಣ ಸಂಪರ್ಕ ಕಳೆದುಕೊಂಡು ನಡುಗಡ್ಡೆ ಆಗಿರುತ್ತಿತ್ತು. ಕೊಲ್ಹಾರದಲ್ಲಿ ಮೊಸರು, ಮೀನು ಯಾವುದೂ ಸಿಗದ ಸ್ಥಿತಿ ಇರುತ್ತಿತ್ತು, ಅಭಿವೃದ್ಧಿ ಕಾಣದೇ ತಾಲೂಕ ಕೂಡ ಆಗುತ್ತಿರಲಿಲ್ಲ ಎಂದು ತಾವು ಮಾಡಿದ ಅಭಿವೃದ್ಧಿ ಪರ ರಾಜಕೀಯ ಬದ್ಧತೆ ವಿವರಿಸಿದರು.
ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾನು ಪಕ್ಷ, ಊರು, ಜಾತಿ ಅಂತೆಲ್ಲ ನೋಡದೇ ಸಂಕಷ್ಟದಲ್ಲಿದ್ದ ಈ ಭಾಗದ ಜನಾಶಯದಂತೆ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಇಷ್ಟೆಲ್ಲ ಅಭಿವೃದ್ಧಿ ಮಾಡಿದರೂ ನನ್ನನ್ನೂ ನೀವು ಸೋಲಿಸಿದಿರಿ ಎಂದು ನಗೆಯಾಡಿದರು.
ರಾಜಕೀಯ ಅಧಿಕಾರ ಶಾಸ್ವತವಲ್ಲ, ರಾಜಕೀಯ ವಿರೋಧವೂ ಶಾಸ್ವತವಲ್ಲ, ಸೋಲು, ಗೆಲುವು ಯಾವುದೂ ಶಾಸ್ವತವಲ್ಲ. ಕಾಲಘಟ್ಟದಲ್ಲಿ ಅಂದು ನನನ್ನು ವಿರೋಧಿಸಿದವರೇ ಇಂದು ನನ್ನ ಅಭಿವೃದ್ಧಿ ಕೆಲಸ ನೋಡಿ ನನ್ನೊಂದಿಗೆ ಬಂದಿದ್ದಾರೆ. ಕಾಲಘಟ್ಟದಲ್ಲಿ ನಾವು ಮಾಡುವ ಕೆಲಸಗಳು ಮಾತ್ರ ಶಾಸ್ವತವಾಗಿ ಉಳಿಯುತ್ತವೆ.
ರಾಜಕೀಯ ರಹಿತವಾಗಿ ನಾವು ಮಾಡುವ ಒಳ್ಳೆ ಕೆಲಸಗಳನ್ನು ಮುಂದಿನ ಪೀಳಿಗೆ ನೆನಪಿಸುವಂತಾಗಬೇಕು ಎಂದರು.
ಏತ ನೀರಾವರಿಯ ಬಳೂತಿ ಜಾಕವೆಲ್ ಕೂಡ ಅರ್ಧಕ್ಕೆ ನಿಂತಿತ್ತು. ಮುಳುಗಡೆ ಸಂತ್ರಸ್ತರವೀ ನೆಲದಲ್ಲಿ ತುರ್ತು ಅಭಿವೃದ್ಧಿ ಅಗತ್ಯವನ್ನು ಮನಗಂಡು ಜನ ಕೊಟ್ಟ ಪ್ರೀತಿ, ಆಶೀರ್ವಾದದಂತೆ ಅಭಿವೃದ್ಧಿ ಮಾಡಿದ್ದೇನೆ. ಹೀಗೆ ಇಡೀ ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರದಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದರೂ ನಾನು ಪ್ರಚಾರ ಪಡೆಯಲಿಲ್ಲ. ಉದ್ಘಾಟನಾ ಸಮಾರಂಭ ಮಾಡಿ ಇದು ನಾನು ಮಾಡಿದ್ದು ಎಂದು ಹೇಳಲಿಲ್ಲ. ನಾನು ಅಭಿವೃದ್ಧಿ ಪರ ಎಂಬ ಕಾರಣಕ್ಕೆ ನೀವು ನನ್ನನ್ನು 4 ಬಾರಿ ಗೆಲ್ಲಿಸಿದ್ದೀರಿ ಎಂದರು.
ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿದ್ದ ಕೊಲ್ಹಾರ ಪುನರ್ವಸತಿ ಕಂಡು ಇದೀಗ
25 ವಸಂತಗಳು ಸಂದಿವೆ. ನಿಮ್ಮ ಸೇವೆ, ತ್ಯಾಗ, ಅಭಿಮಾನ, ಪ್ರೀತಿಗೆ ಕೃತಜ್ಞತೆ ಸಲ್ಲಿಸಲು ಬೆಳ್ಳಿ ಹಬ್ಬದ ಸಂಭ್ರಮ ಹಮ್ಮಿಕೊಂಡಿದ್ದೇವೆ. ಸದರಿ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಆಗಮಿಸಲಿದ್ದು, ಕ್ಷೇತ್ರದ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಮನವಿ ಮಾಡಿದರು.
ಕೊಲ್ಹಾರ, ಸಿದ್ದನಾಥ, ಬಳೂತಿ, ಮಸೂತಿ, ಮಲಘಾಣ, ಕುಪಕಡ್ಡಿ, ರೋಣಿಹಾಳ, ಹಳೆರೊಳ್ಳಿ, ತಳೇವಾಡ, ಕೂಡಗಿ, ಕಲಗುರ್ಕಿ ಸೇರಿದಂತೆ ಇತರೆ ಗ್ರಾಮಗಳ ಜನರು ಪಾಲ್ಗೊಂಡಿದ್ದರು.

ಕೊಲ್ಹಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ, ಜಿ.ಪಂ. ಮಾಜಿ ಸದಸ್ಯ ಕಲ್ಲಪ್ಪ ದೇಸಾಯಿ, ಉಸ್ಮಾನ ಪಟೇಲ, ಪಟ್ಟಣ ಪಂಚಾಯತ ಅಧ್ಯಕ್ಷ ಸಿ.ಎಸ್. ಗಿಡ್ಡಪ್ಪಗೋಳ, ಶ್ರೀ ಶಿವಾನಂದ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ತಾನಾಜಿ ನಾಗರಾಳ, ಮಲ್ಲಪ್ಪ ಬೀಳಗಿ, ಎಸ್.ಬಿ.ಪತಂಗಿ, ಶಿವಲಿಂಗಪ್ಪ ತಳೇವಾಡ, ಎಸ್.ಎಸ್.ಗರಸಂಗಿ, ಕುಮಾರಗೌಡ ಪಾಟೀಲ, ಸದಾನಂದ ನಿಂಗನೂರ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕೊಲ್ಹಾರ ಪಟ್ಟಣದಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆಗೆ ಆಗಮಿಸುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.