
ಕೋಲ್ಕತ್ತಾ, ಡಿ.೧೩ : ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಅವರ ೭೦ ಅಡಿ ಎತ್ತರದ ಪ್ರತಿಮೆಯನ್ನು ಕೋಲ್ಕೊತಾದ ಲೇಕ್ ಟೌನ್ ನಲ್ಲಿ ಇಂದು ಸಾವಿರಾರೂ ಅಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
’ಗೋಟ್ ಟೂರ್ ಆಫ್ ಇಂಡಿಯಾ’ ಭಾಗವಾಗಿ ಭಾರತಕ್ಕೆ ಆಗಮಿಸಿರುವ ಅವರು ಇಂದು ಮುಂಜಾನೆ ಕೋಲ್ಕತ್ತಾಗೆ ಆಗಮಿಸಿದರು. ಮೆಸ್ಸಿ ಜೊತೆಗೆ ಅವರ ಇಂಟರ್ ಮಿಯಾಮಿ ತಂಡದ ಆಟಗಾರರಾದ ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಸಹ ಭಾರತಕ್ಕೆ ಆಗಮಿಸಿದ್ದಾರೆ. ೧೪ ವರ್ಷಗಳ ನಂತರ ಭಾರತಕ್ಕೆ ಮರಳಿದ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದರು. ಅವರು ಅರ್ಜೆಂಟೀನಾದ ಧ್ವಜಗಳನ್ನು ಬೀಸುತ್ತಾ ’ಮೆಸ್ಸಿ ಮೆಸ್ಸಿ’ ಎಂದು ಘೋಷಣೆ ಕೂಗುತ್ತಾ ಭವ್ಯ ಸ್ವಾಗತ ನೀಡಿದರು.
ಬೆಳಗ್ಗೆ ೧೦.೩೦ರ ವೇಳೆಗೆ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೆ ಲೇಕ್‌ಟೌನ್‌ನಲ್ಲಿರುವ ೭೦ ಅಡಿ ಎತ್ತರದ ಪ್ರತಿಮೆಯನ್ನು ಮೆಸ್ಸಿ ವರ್ಚುಯಲ್ ಆಗಿ ಅನಾವರಣಗೊಳಿಸಿದರು. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ಅಲ್ಲಿಗೆ ಹೋಗಲಿಲ್ಲ. ನಂತರ, ಅವರು ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಿದರು. ಆದರೆ ಕೆಲವೇ ನಿಮಿಷಗಳು ಇದ್ದ ಕಾರಣ ಬೇಸರಗೊಂಡ ಅಭಿಮಾನಿಗಳು ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವ ನಿಗದಿಯಂತೆ ಮೆಸ್ಸಿ ಇಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಬೇಕಿತ್ತು.
ಕೋಲ್ಕತ್ತಾದಲ್ಲಿ ಕಾರ್ಯಕ್ರಮ ಮುಗಿದ ನಂತರ, ಮೆಸ್ಸಿ ಹೈದರಾಬಾದ್‌ಗೆ ತೆರಳಲಿದ್ದಾರೆ. ಅವರು ಫಲಕ್ನುಮಾ ಅರಮನೆ ಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ, ಅವರು ಉಪ್ಪಲ್ ಕ್ರೀಡಾಂಗಣದಲ್ಲಿ ಗೋಟ್ ಕಪ್ ಎಂಬ ಫುಟ್ಬಾಲ್ ಪಂದ್ಯದಲ್ಲಿ ಆಡಲಿದ್ದಾರೆ. ಉಪ್ಪಾಳ ಕ್ರೀಡಾಂಗಣದಲ್ಲಿ ಸಂಜೆ ೭ ಗಂಟೆಗೆ ಆರಂಭವಾಗಲಿರುವ ಈ ಪಂದ್ಯದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಭಾಗಿ ಆಗಲಿದ್ದಾರೆ ಎಂದು ವರದಿಯಾಗಿದೆ.
ಭಾರತದಲ್ಲಿ ೭೨ ಗಂಟೆಗಳಿಗಿಂತ ಕಡಿಮೆ ಸಮಯ ಕಳೆಯಲಿರುವ ಮೆಸ್ಸಿ, ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ೧೪ ರಂದು ಮುಂಬೈನಲ್ಲಿ ಮತ್ತು ೧೫ ರಂದು ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಮೂಲಕ ಗೋಟ್ ಪ್ರವಾಸ ಕೊನೆಗೊಳ್ಳಲಿದೆ.
ಪಶ್ಚಿಮ ಬಂಗಾಳದ ಸಚಿವ ಮತ್ತು ಶ್ರೀಭೂಮಿ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷ ಸುಜಿತ್ ಬೋಸ್, ಈ ಬೃಹತ್ ಪ್ರತಿಮೆಯನ್ನು ಕೇವಲ ೪೦ ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಇದು ೭೦ ಅಡಿ ಎತ್ತರದ್ದಾಗಿದೆ. ಜಗತ್ತಿನಲ್ಲಿ ಮೆಸ್ಸಿಯ ಇಷ್ಟು ದೊಡ್ಡ ಪ್ರತಿಮೆ ಬೇರೆಲ್ಲೂ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಮೆಸ್ಸಿಗಾಗಿ ಹಾತೊರೆದ ಅಭಿಮಾನಿಗಳ..
ಮೆಸ್ಸಿಯನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ಧಾವಿಸಿದ್ದರು. ಆದರೆ ಮೆಸ್ಸಿ ಕೇವಲ ಹತ್ತರಿಂದ ೧೫ ನಿಮಿಷ ಬಂದು ಹೋದರು. ಇದರಿಂದ ಕುಪಿತಗೊಂಡ ಅಭಿಮಾನಿಗಳು ಮೈದಾನದತ್ತ ನೀರಿನ ಬಾಟಲ್ ಗಳನ್ನು ತೂರಿದರು. ಚೇರ್ ಗಳನ್ನು ಬೀಸಾಡಿದರು. ಸಂಘಟಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೂರ್ವ ನಿಗದಿಯಂತೆ ಮೆಸ್ಸಿ ಇಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಗಂಗೂಲಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಇದಾವುದು ನಡೆಯದ ಕಾರಣ ತ್ವರಿತವಾಗಿ ನಿರ್ಗಮಿಸಿದ್ದು, ಅಭಿಮಾನಿಗಳಲ್ಲಿ ಆಕ್ರೋಶ ಕಟ್ಟೆ ಹೊಡೆಯಲು ಕಾರಣವಾಯಿತು.




























