
ವಿಜಯಪುರ, ಡಿ. 7:ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ನಡೆದ ಭೀಮನಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿತರಿಗೆ ಜೀವಾವದಧಿ ಶಿಕ್ಷೆ ಹಾಗೂ ತಲಾ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಮನೆ ಮುಂದಿನ ಖುಲ್ಲಾ ಜಾಗೆ ಸಲುವಾಗಿ ದಾಯಾದಿಗಳ ಮಧ್ಯೆ ಮೇಲಿಂದ ಮೇಲೆ ಕಲಹ ಉಂಟಾಗುತ್ತಿತ್ತು. 9-10-2013ರಂದು ಈ ಸಂಬಂಧ ಕಲಹ ವಿಕೋಪಕ್ಕೆ ಹೋಗಿ ಭೀಮನಗೌಡ ನಿಂಗನಗೌಡ ಪಾಟೀಲ ಹಾಗೂ ಆತನ ಸಹೋದರರಾದ ಫಿರ್ಯಾದಿ ಶಂಕರಗೌಡ, ನಿಂಗನಗೌಡ ಪಾಟೀಲ, ಶರಣಗೌಡ, ನಿಂಗನಗೌಡ ಪಾಟೀಲ, ಗುರುಪಾದಪ್ಪಗೌಡ ನಿಂಗನಗೌಡ ಪಾಟೀಲ ಇವರೆಲ್ಲರಿಗೂ ಮನೆಯ ಪಕ್ಕದಲ್ಲಿ ವಾಸ ಮಾಡುತ್ತಿದ್ದ 2ನೇ ಅಣ್ಣ ತಮ್ಮಂದಿರರಾದ ಮತ್ತು ಈ ಪ್ರಕರಣದ ಆರೋಪಿತರಾದ ರಾಜಶೇಖರ ಬಾಪುಗೌಡ ಪಾಟೀಲ ಹಾಗೂ ಆತನ ಮಕ್ಕಳಾದ ವೀರನಗೌಡ ರಾಜಶೇಖರಗೌಡ ಪಾಟೀಲ, ಆನಂದಗೌಡ ರಾಜಶೇಖರಗೌಡ ಪಾಟೀಲ ಇವರುಗಳು ಸದರಿ ಖುಲ್ಲಾ ಜಾಗಾ ತಮಗೆ ಸಂಬಂಧಪಟ್ಟಿದ್ದೆಂದು ಆಗಾಗ್ಗೆ ಜಗಳ ತೆಗೆಯುತ್ತಿದ್ದರು. ಸದರಿ ಖುಲ್ಲಾ ಜಾಗದಲ್ಲಿ ಗುರುಪಾದಪ್ಪಗೌಡ ಮನೆ ಕಟ್ಟುವ ಸಲುವಾಗಿ ಕಲ್ಲು ಮಣ್ಣು ಹಾಕಿದ್ದರು. ದಿನಾಂಕ:09-10-2013 ಆರೋಪಿತರಾದ ರಾಜಶೇಖರಗೌಡ ಪಾಟೀಲ ಹಾಗೂ ಆತನ ಮಕ್ಕಳಾದ ವೀರನಗೌಡ ಹಾಗೂ ಆನಂದಗೌಡ ಇವರೆಲ್ಲರೂ ಕೂಡಿಕೊಂಡು ಫಿರ್ಯಾದಿಯ ಮನೆಯ ಹತ್ತಿರ ಬಂದು ಖುಲ್ಲಾ ಜಾಗೆ ತಮಗೆ ಸೇರಿದ್ದು ಕಲ್ಲು ಮಣ್ಣು ತೆಗೆಯಿರಿ ಇಲ್ಲ ಅಂದರೆ ಪರಿಣಾಮ ನೆಟ್ಟಗಾಗುವುದಿಲ್ಲವೆಂದು ಹೆದರಿಸಿ ಜೀವದ ಧಮಕಿ ಹಾಕಿ ಹೋಗಿದ್ದರು. ಪುನ: ಅದೇ ದಿನ ಸಾಯಂಕಾಲ 7-15 ಗಂಟೆಯ ಸುಮಾರಿಗೆ ಸದರಿ ಆರೋಪಿತರು ತಮ್ಮೊಂದಿಗೆ ಹುಣಸಗಿಯಿಂದ ಚಂದ್ರಶೇಖರ ಬಸಲಿಂಗಪ್ಪ ಕುಂಬಾರ, ಶರಣಬಸು ರುದ್ರಪ್ಪ ಸೇವಟಿ, ಮಲ್ಲಿಕಾರ್ಜುನ ಸಂಗಪ್ಪ ಅಂಗಡಿ ಹಾಗೂ ಬಸವರಾಜ ಚಂದ್ರಶೇಖರ ಯಾಳಗಿ ಅವರನ್ನು ಕರೆದುಕೊಂಡು ಬಂದು ಎಲ್ಲರೂ ತಮ್ಮ ಕೈಯಲ್ಲಿ ಕಬ್ಬಿಣದ ರಾಡಗಳಿಂದ ಹಾಗೂ ಬಡಿಗೆಗಳಿಂದ ಭೀಮನಗೌಡ ಫಿರ್ಯಾದಿ ಶಂಕರಗೌಡ ಹಾಗೂ ಸಹೋದರರಾದ ಶರಣಗೌಡ, ಗುರುಪಾದಪ್ಪಗೌಡ ಇವರೆಲ್ಲರಿಗೆ ಕೊಲೆ ಮಾಡುವ ಉದ್ದೇಶ ಹೊಂದಿ ಹೊಡಿ-ಬಡಿ ಮಾಡಿ ಭಾರಿ ಗಾಯಪಡಿಸಿದ್ದರು. ತೀವ್ರವಾಗಿ ಗಾಯ ಹೊಂದಿದ ಭೀಮನಗೌಡ ಮೃತ ಪಟ್ಟಿದ್ದರು. ಉಳಿದವರು ಗಾಯಗೊಂಡಿದ್ದರು.
ಪ್ರಕರಣದ ತನಿಖೆಯನ್ನು ಪಿಎಸ್‍ಐ ಅಶೋಕ ಚವ್ಹಾಣ ಮಾಡಿದ್ದರು. ಸಿಪಿಐ ಗಂಗಾಧರಪ್ಪ ಅವರು ನ್ಯಾಯಾಲಯಕ್ಕೆ ಆಪಾದನೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮದ್ವೇಶ ದಬೇರ ಅವರು ಅಭಿಯೋಗದ ಪರ ಹಾಜರುಪಡಿಸಲಾದ ಸಾಕ್ಷಿ ಪುರಾವೆಗಳನ್ನು ಅವಲೋಕಿಸಿ ಅಭಿಯೋಗವು, 7 ಜನ ಆರೋಪಿತರಾದ ರಾಜಶೇಖರ ಬಾಪುಗೌಡ ಪಾಟೀಲ ಹಾಗೂ ಆತನ ಮಕ್ಕಳಾದ ವೀರನಗೌಡ, ರಾಜಶೇಖರಗೌಡ ಪಾಟೀಲ, ಆನಂದಗೌಡ ರಾಜಶೇಖರಗೌಡ ಪಾಟೀಲ, ಚಂದ್ರಶೇಖರ ಬಸಲಿಂಗಪ್ಪ ಕುಂಬಾರ, ಶರಣಬಸು ರುದ್ರಪ್ಪ ಸೇವಟ, ಮಲ್ಲಿಕಾರ್ಜುನ ಸಂಗಪ್ಪ ಅಂಗಡಿ, ಬಸವರಾಜ ಚಂದ್ರಶೇಖರ ಯಾಳಗಿ ಅವರ ಮೇಲಿನ ಆಪಾದನೆಯನ್ನು ರುಜುವಾತುಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತೀರ್ಮಾನಿಸಿ, ಈ 7 ಜನ ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮತ್ತು ತಲಾ 50,000 ರೂ. ದಂಡ ವಿಧಿಸಿ ದಿನಾಂಕ:01.12.2025 ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವಿ. ಜಿ. ಹಗರಗುಂಡ ಅವರು ವಾದ ಮಂಡಿಸಿದ್ದರು.
























