Home ಮುಖಪುಟ ಸುದ್ದಿ ಪ್ರತ್ಯೇಕ ಅಪಘಾತಕ್ಕೆ ೭ ಮಂದಿ ಸಾವು ೮ ಮಂದಿಗೆ ಗಾಯ

ಪ್ರತ್ಯೇಕ ಅಪಘಾತಕ್ಕೆ ೭ ಮಂದಿ ಸಾವು ೮ ಮಂದಿಗೆ ಗಾಯ

ಬೆಂಗಳೂರು,ಮಾ,೨೨-ಟೆಂಪೋ ಟ್ರಾವೆಲರ್ ಗೆ ಲಾರಿ ಡಿಕ್ಕಿ ಹೊಡೆದು ಕಾಶಿಗೆ ಹೊರಟಿದ್ದ ಮೂವರು ಮಹಿಳೆಯರು,ನಿಂತಿದ್ದ ಈಚರ್ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಮೂವರು ಸೇರಿ ನಗರದ ಮೂರು ಕಡೆಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ೭ ಮಂದಿ ಮೃತಪಟ್ಟು,೮ ಮಂದಿ ಗಾಯಗೊಂಡಿದ್ದಾರೆ.


ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ನಿನ್ನೆ ಮಧ್ಯರಾತ್ರಿ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದ ಟೆಂಪೋ ಟ್ರಾವೆಲರ್ (ಟಿಟಿ)ಗೆ ಲಾರಿ ಡಿಕ್ಕಿ ಹೊಡೆದು ೧೩ ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ ೮ ಮಂದಿ ಗಾಯಗೊಂಡಿದ್ದಾರೆ.


ತಿಪಟೂರು ತಾಲೂಕಿನ ಜಯಮ್ಮ(೬೦), ಯಶೋದಮ್ಮ(೬೦), ಗಂಗಾ(೩೮) ಮೃತಪಟ್ಟವರು, ಗಾಯಗೊಂಡಿರುವ ಟಿಟಿ ಚಾಲಕ ಸೇರಿದಂತೆ ೮ ಮಂದಿಯನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರ ಗಾಯಗೊಂಡ
ಕೆಂಪಮ್ಮ ಅವರನ್ನು ನಗರದ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


೧೫ ದಿನಗಳ ಕಾಲ ಕಾಶಿ ಇನ್ನಿತರ ಪುಣ್ಯ ಕ್ಷೇತ್ರಗಳ ಪ್ರವಾಸಕ್ಕೆಂದು ಸ್ತ್ರೀ ಶಕ್ತಿ ಸಂಘಟನೆಯ ಚೀಟಿ ಮೂಲಕ ೧೨ ಜನರ ತಂಡ ಇಂದು ಬೆಳಗ್ಗೆ ೬ ಗಂಟೆಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟಿಟಿಯಲ್ಲಿ ರಾತ್ರಿ ೧೦ ಗಂಟೆ ಸುಮಾರಿಗೆ ಹೊರಟಿದ್ದರು.


ವಿಮಾನ ನಿಲ್ದಾಣದ ಟರ್ಮಿನಲ್ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದರು.


ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್ ರಸ್ತೆಗೆ ಮೊದಲ ತಿರುವು ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಹೋಗಿದ್ದ ಟಿಟಿ ವಾಹನ ಮುಂದಿನ ತಿರುವಿನಲ್ಲಿ ಯೂಟರ್ನ್ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ.


ಚಾಲಕ ಪರಾರಿ:


ಟಿಟಿ ವಾಹನ ವಿಮಾನ ನಿಲ್ದಾಣಕ್ಕೆ ೧೨ ಮಂದಿಯನ್ನು ಬಿಡಲು ತೆರಳುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಬರುವ ವೇಳೆ ಚಾಲಕ ರಸ್ತೆ ತಪ್ಪಿ ಮುಂದೆ ಬಂದಿದ್ದಾರೆ. ಬಲಗಡೆಯಿಂದ ಟಿಟಿ ಮಧ್ಯಭಾಗಕ್ಕೆ ದಿಢೀರ್ ಬಂದಾಗ ಪಕ್ಕದಲ್ಲಿದ್ದ ಲಾರಿ ಡಿಕ್ಕಿ ಹೊಡೆದಿದೆ.


ಲಾರಿಯು ಅತಿವೇಗವಾಗಿ ಚಲಿಸುತ್ತಿದ್ದರಿಂದ ಭೀಕರ ಅಪಘಾತ ಸಂಭವಿಸಿದೆ ಅಪಘಾತದ ನಂತರ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


ಮೂವರು ದುರ್ಮರಣ:


ಟೈರ್ ಬದಲಿಸಲು ನಿಂತಿದ್ದ ಈಚರ್ ವಾಹನಕ್ಕೆ ವೇಗವಾಗಿ ಕ್ಯಾಂಟರ್ ಲಾರಿ ಡಿಕ್ಕಿ ಹೊಡೆದು ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕೆಆರ್‌ಪುರಂನ ಮೇಡಹಳ್ಳಿ ಮೇಲ್ಸೇತುವೆ ರಸ್ತೆಯಲ್ಲಿ ನಡೆದಿದೆ.


ಅಪಘಾತದ ರಭಸಕ್ಕೆ ವೈಟ್ ಫೀಲ್ಡ್ ನ ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತಪಟ್ಟವರು,ಕೋಲಾರದಿಂದ ನಗರಕ್ಕೆ ಆಲೂಗಡ್ಡೆ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಲಾರಿ ಮೇಡಹಳ್ಳಿ ಮೇಲ್ಸೇತುವೆ ರಸ್ತೆಯಲ್ಲಿ ಟೈರ್ ಸ್ಫೋಟಗೊಂಡು ನಿಂತಿದ್ದ ಕ್ಯಾಂಟರ್ ಗೆ ಚಾಲಕ ಟೈರ್ ಬದಲಾವಣೆ ಮಾಡುತ್ತಿದ್ದಾಗ ಹಿಂದಿನಿಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.


ಡಿಕ್ಕಿ ಪರಿಣಾಮ ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟಿದ್ದರು.ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.


ಅಪಘಾತ ಯುವಕ ಸಾವು:


ಇಸ್ಕಾನ್ ಬಳಿಯ ಕಮಲಮ್ಮನ ಗುಂಡಿ ಬಳಿ ಸಂಭವಿಸಿದ ಅಪಘಾತದಲ್ಲಿ ೨೪ರ ಹರೆಯದ ಯುವಕ ಮೃತಪಟ್ಟ ಘಟನೆ ನಡೆದಿದೆ.


ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಅತಿಯಾದ ವೇಗದಿಂದ ಅಪಘಾತವಾಗಿದೆ.


ಘಟನೆ ಸಂಬಂಧ ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.