ಸಿಲಿಕಾನ್ ಸಿಟಿಯಲ್ಲಿ ಹಾಡು ಹಗಲೇ 7.11ಕೋಟಿ ರೂ. ದರೋಡೆ

ಬೆಂಗಳೂರು,ನ.19- ಬೆಂಗಳೂರಿನಲ್ಲಿ ಹಾಡುಹಗಲೇ 7.11 ಕೋಟಿ ರೂಪಾಯಿ ದರೋಡೆ ಯಾಗಿರುವ ಇಂದು ಘಟನೆ ನಡೆದಿದೆ.


ಮಧ್ಯಾಹ್ನ ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್, ಎಟಿಎಂಗೆ ಹಣ ಹಾಕಲು ಹೊರಟಿದ್ದ ವಾಹನ ತಡೆದು 7.11 ಕೋಟಿ ರೂ ದೋಚಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದೆ.


ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂ ಕಡೆ ಹೊರಟಿದ್ದ ಹಣ ಇದ್ದ ವಾಹನವನ್ನು ಜಯದೇವ ಡೇರಿ ಸರ್ಕಲ್​​ನ ಬಳಿ ತಡೆದು ಹಣ ದೋಚಿಕೊಂಡು ಪರಾರಿಯಾಗಿದೆ
ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ಹಾಕಲೆಂದು ಜಿಜೆ 01 ಎಚ್ ಟಿ9173 ಸಂಖ್ಯೆ ವಾಹನ ಹಣ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ ಜಯದೇವ ಡೇರಿ ಸರ್ಕಲ್​ನಲ್ಲಿ ಇನ್ನೋವಾದಲ್ಲಿ ಬಂದ ಆರೇಳು ಜನರ ಗ್ಯಾಂಗ್, ಎಟಿಎಂ ವಾಹನ ತಡೆದು ನಾವು ಆರ್​​ಬಿಐನವರು ಎಂದು ಹೇಳಿಕೊಂಡು ಹೆದರಿಸಿದ್ದಾರೆ.


ಗನ್​​ಮ್ಯಾನ್​​ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿ ವಾಹನ ಸಮೇತ ಚಾಲಕನನ್ನು ಡೇರಿ ಸರ್ಕಲ್​ಗೆ ಕರೆದೊಯ್ದಿದ್ದಾರೆ. ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಆರ್ ಬಿಐ ಹೆಸರಲ್ಲಿ ಹೈಜಾಕ್

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್‌ ಪಿಲ್ಲರ್ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ದರೋಡಕೋರರು,ನಾವು ಆರ್ ಬಿ ಐ ನವರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ನೀವು ನಿಯಮ ಉಲ್ಲಂಘಿಸಿದ್ದೀರಿ. ಪೊಲೀಸ್ ಠಾಣೆಗೆ ಬನ್ನಿ ಎಂದು ಹಣ ಇದ್ದ ಸಿಎಂಎಸ್ ವಾಹನ ಹೈಜಾಕ್ ಮಾಡಿ ತಂದಿದ್ದಾರೆ. ನಂತರ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್​ ಫ್ಲೈಓವರ್​ನಲ್ಲಿ ವಾಹನ ನಿಲ್ಲಿಸಿ ಹಣವನ್ನು ತಮ್ಮ ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ.

ಎಟಿಎಂ ವಾಹನದಲ್ಲಿ ಒಟ್ಟು ನಾಲ್ಕು ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಓರ್ವ ಡ್ರೈವರ್,ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ. ಇನ್ನು ಫಿಂಗರ್ ಪ್ರಿಂಟ್ ತಂಡ ಹಾಗೂ ಶ್ವಾನ ದಳ ಕೂಡ ಆಗಮಿಸಿ ತನಿಖೆ ಕೈಗೊಂಡಿದೆ.

ನಕಲಿ ನಂಬರ್ ಪ್ಲೇಟ್

ದರೋಡೆಕೋರರು ತಂದಿದ್ದ ಇನ್ನೋವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಿಡಿಸಿರುವುದು ಬೆಳಕಿಗೆ ಬಂದಿದೆ. ಕೆಎ 03 ಎನ್ ಸಿ 8052 ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಆದ್ರೆ, ಕೆಎ 03 ಎನ್ ಸಿ 8052 ಸಂಖ್ಯೆಯ ಮೂಲ ಕಾರು ಮಾರುತಿ ಸುಜುಕಿ ಎಂದು ತಿಳಿದುಬಂದಿದೆ. ಇದರಿಂದ ಈ ಗ್ಯಾಂಗ್ ಪಕ್ಕಾ ಪ್ಲ್ಯಾನ್ ಮಾಡಿಯೇ ಈ ಕೃತ್ಯ ಎಸಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಹಣ ದರೋಡೆ ಮಾಡಿ ಗ್ಯಾಂಗ್, ​ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಡೇರಿ ಸರ್ಕಲ್, ಕೋರಮಂಗಲ, ಸೋನಿ ವರ್ಲ್ಡ್ ಜಂಕ್ಷನ್, ದೊಮ್ಮಲೂರು, ಮಾರತ್ತಹಳ್ಳಿ, ವೈಟ್​ ಫಿಲ್ಡ್​​ ಮಾರ್ಗವಾಗಿ ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸರು ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​, ;ಸಿದ್ದಾಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ದಕ್ಷಿಣ ಡಿಸಿಪಿ ಮತ್ತು ಪಶ್ಚಿಮ ವಿಭಾಗ ಜಂಟಿ ಪೊಲೀಸ್​ ಆಯುಕ್ತರು ಸ್ಥಳದಲ್ಲಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಅಂದಾಜು 7 ಕೋಟಿ ಹಣ ದರೋಡೆಯಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಚಾಲಕನ ಹೇಳಿಕೆ ಕೂಡ ಪಡೆಯಲಾಗುತ್ತಿದೆ ಎಂದರು.

ಶಂಕಿತ ಆರೋಪಿಗಳ ಚಿತ್ರ ಬಿಡುಗಡೆ

ಚಾಲಕ ನೀಡಿದ ಪ್ರಾಥಮಿಕ ಮಾಹಿತಿ ಅನುಸಾರ ಹಳೆ ಆರೋಪಿಗಳು ಹಾಗು ಕೆಲವು ಶಂಕಿತರೂ ಸೇರಿ 6 ಜನರ ಫೋಟೋ ಬಿಡುಗಡೆ ಮಾಡಲಾಗಿದೆ. ನಾಕಾ ಬಂದಿಯಲ್ಲಿರುವ ಸಿಬ್ಬಂದಿಗೆ ಈ ಫೋಟೊಗಳನ್ನು ರವಾನಿಸಿದ್ದು, ಪರಿಶೀಲನೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.