
ಬೆಂಗಳೂರು,ಮಾ.೬-ಮಹಿಳಾ ಸಬಲೀಕರಣದ ಸದುದ್ದೇಶದಿಂದ ಜಾರಿಗೆ ತರಲಾಗಿರುವ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ೨೦೨೬-೨೭ನೇ ಸಾಲಿಗೆ ೫,೩೦೦ ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಅವರು ಶಕ್ತಿ ಯೋಜನೆಯಡಿ ಪ್ರಯೋಜನ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಇದುವರೆಗೆ ೬೮೪ ಕೋಟಿ ಟ್ರಿಪ್‌ಗಳಲ್ಲಿ ಮಹಿಳಾ ಫಲಾನುಭವಿಗಳು ಪ್ರಯಾಣ ಸೌಲಭ್ಯ ಪಡೆದಿದ್ದಾರೆ ಎಂದು ಹೇಳಿದರು.
ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ಹಿಂದಿನ ಸರ್ಕಾರ ೧.೦೩.೨೦೨೩ ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿದ್ದು, ಅದಕ್ಕೂ ಮೊದಲಿನ ಅವಧಿಯ ವೇತನ ಪರಿಷ್ಕರಣೆಯ ವ್ಯತ್ಯಾಸದ ಮೊತ್ತವನ್ನು ಪಾವತಿ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.ಸದರಿ ಅವಧಿಯ ಪರಿಷ್ಕರಣೆ ಬಾಕಿ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿ ೧.೦೧.೨೦೨೧ ರಿಂದ ೨೮.೦೨.೨೦೨೩ ರವರೆಗಿನ ವೇತನ ಬಾಕಿಯನ್ನು ಪಾವತಿಸಲು ಹಾಗೂ ೧.೦೪.೨೦೨೫ ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಲು ಸರ್ಕಾರ ನಿಶ್ಚಯಿಸಿ ವೇತನ ಬಾಕಿ ಪಾವತಿಗಾಗಿ ೧,೨೭೧ ಕೋಟಿ ರೂಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಉತ್ತಮಪಡಿಸಲು ೨೦೨೫-೨೬ನೇ ಸಾಲಿನಲ್ಲಿ ಘೋಷಿಸಿದ ೨,೦೦೦ ಡೀಸೆಲ್ ಬಸ್ಸುಗಳನ್ನು ನೇರ ಖರೀದಿ ಮೂಲಕ ಒದಗಿಸಲು ಈಗಾಗಲೇ ಕ್ರಮವಹಿಸಲಾಗಿರುತ್ತದೆ. ಇದೂ ಸೇರಿದಂತೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟಾರೆ ೬,೫೯೬ ಸಂಖ್ಯೆಯ ಬಸ್ಸುಗಳನ್ನು ನಿಗಮಗಳಿಗೆ ಒದಗಿಸಲಾಗಿರುತ್ತದೆ. ೨೦೨೬-೨೭ನೇ ಸಾಲಿನಲ್ಲಿ ೧,೦೦೦ ಡೀಸೆಲ್ ಬಸ್ಸುಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ವಿಶ್ವಬ್ಯಾಂಕ್ ನೆರವಿನೊಂದಿಗೆ ೨,೦೦೦ ಕೋಟಿ ರೂ.ಗಳ ಮೊತ್ತದ ಕರ್ನಾಟಕ ಎಲೆಕ್ಟ್ರಿಕ್ ಬಸ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಇದರಡಿ ಬಿಎಂಟಿಸಿ ಸಂಸ್ಥೆಯ ೩೨ ಹಾಗೂ ಇತರೆ ರಸ್ತೆ ಸಾರಿಗೆ ನಿಗಮಗಳ ೬೨ ಎಲೆಕ್ಟ್ರಿಕ್ ಬಸ್ ಡಿಪೋಗಳನ್ನು ಅಭಿವೃದ್ಧಿ ಪಡಿಸಿ ೪ ಸಾವಿರ ವಿದ್ಯುತ್ ಚಾಲಿತ ಬಸ್ ಒದಗಿಸಲಾಗುವುದು ಎಂದು ಹೇಳಿದರು.




























