೪೨ ಯಾತ್ರಿಕರ ಸಜೀವದಹನ

ಮೃತರೆಲ್ಲರು ಭಾರತೀಯರು

ದುಬೈ,ನ.೧೭- ಸೌದಿ ಅರೇಬಿಯಾದ ಮದೀನಾದ ಮುಫ್ರಿಹಾತ್ ಬಳಿ ಬಸ್ ಮತ್ತು ತೈಲ ತುಂಬಿದ್ದ ಟ್ಯಾಂಕರ್ ಡಿಕ್ಕಿಯಲ್ಲಿ ೪೨ ಭಾರತೀಯರು ಸ್ಥಳದಲ್ಲಿಯೇ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಭಾರತೀಯ ಕಾಲಮಾನ ಬೆಳಗಿನ ಜಾವ ಈ ಅಪಘಾತ ಸಂಭವಿಸಿದೆ. ದೇವರ ದರ್ಶನ ಮುಗಿಸಿ ಸುಖನಿದ್ರೆಯಲ್ಲಿದ್ದವರು ಚಿರನಿದ್ರೆಗೆ ಜಾರಿದ್ದಾರೆ.

ಬಸ್ ಮೆಕ್ಕಾದಿಂದ ಮದೀನಾಗೆ ತೆರಳುತ್ತಿತ್ತು ಎಂದು ವರದಿಯಾಗಿದ್ದು ಈ ಬಸ್‌ನಲ್ಲಿದ್ದ ಹೆಚ್ಚಿನ ಪ್ರಯಾಣಿಕರು ತೆಲಂಗಾಣದ ಹೈದರಾಬಾದ್‌ನವರಾಗಿದ್ದಾರೆ. ಮೃತಪಟ್ಟವರಲ್ಲಿ ಕನಿಷ್ಠ ೧೧ ಮಹಿಳೆಯರು ಮತ್ತು ೧೦ ಮಕ್ಕಳು ಇದ್ದಾರೆ ಎಂದು ವರದಿ ಹೇಳಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸತ್ತವರನ್ನು ಗುರುತಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.

ಉಮ್ರಾ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮದೀನಾ ಬಳಿ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ೪೨ ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಸಾವನ್ನಪ್ಪಿದವರಲ್ಲಿ ಹಲವರು ಭಾರತೀಯ ಪ್ರಜೆಗಳು ಎಂದು ಹೇಳಲಾಗಿದೆ.

ಭಾರತೀಯ ಕಾಲಮಾನ ಬೆಳಗಿನ ಜಾವ ೧.೩೦ ರ ಸುಮಾರಿಗೆ ಅಪಘಾತ ಸಂಭವಿಸಿದಾಗ ಬಸ್ ಮೆಕ್ಕಾದಿಂದ ಮದೀನಾಗೆ ತೆರಳುತ್ತಿತ್ತು ಈ ಗುಂಪು ತಮ್ಮ ಧಾರ್ಮಿಕ ವಿಧಿಗಳನ್ನು ಮುಗಿಸಿ ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ವೇಳೆ ಈ ಘೋರ ದುರಂತ ಸಂಭವಿಸಿದೆ.

ಬೆಳಗಿನ ಜಾವವಾದ ಹಿನ್ನೆಲೆಯಲ್ಲಿ ಬಹುತೇಕ ಉಮ್ರಾ ಯಾತ್ರಿಕರು ನಿದ್ರಿಸುತ್ತಿದ್ದರು. ಡಿಕ್ಕಿಯ ನಂತರ ಬಸ್ ಬೆಂಕಿ ಹೊತ್ತಿಕೊಂಡಾಗ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸಜೀವ ದಹನಗೊಂಡಿದ್ದಾರೆ. ಹೀಗಾಗಿ ಡಿಕ್ಕಿಯ ರಭಸಕ್ಕೆ ಎರಡು ವಾಹನಗಳು ಹೊತ್ತಿ ಉರಿದಿದೆ.

ಈ ನಡುವೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್, ಭಾರತೀಯ ರಾಯಭಾರ ಕಚೇರಿ ಮತ್ತು ಅಲ್ಲಿನ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದು ಕೊಂಡಿದ್ದಾರೆ.

ತೆಲಂಗಾಣ ಸರ್ಕಾರದಿಂದ ಸಂಪರ್ಕ

ಉಮ್ರಾ ಯಾತ್ರಿಕರು ಮೃತಪಟ್ಟ ಮಾಹಿತಿ ತಿಳಿಯುತ್ತಿದ್ದಂತೆ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ನವದೆಹಲಿಯ ಅಧಿಕಾರಿಗಳನ್ನು ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಸಮನ್ವಯಗೊಳಿಸಲು ಸೂಚಿಸಿದ್ದಾರೆ.

ಬಸ್ ಮತ್ತು ತೈಲ ತುಂಬಿದ್ದ ಟ್ಯಾಂಕರ್ ಅಪಘಾತದಲ್ಲಿ ತೆಲಂಗಾಣಕ್ಕೆ ಸೇರಿದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವ ಕುರಿತು ಮಾಹಿತಿ ಸಂಗ್ರಹಿಸಲು ಸರ್ಕಾರವು ನಿವಾಸ ಆಯುಕ್ತರಿಗೆ ಸೂಚನೆ ನೀಡಿದೆ ಜೊತೆಗೆ ರಾಜ್ಯ ಸಚಿವಾಲಯದಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.

ಸಂತ್ರಸ್ತರ ಕುಟುಂಬಕ್ಕೆ ಸಹಾಯ ಮಾಡಲು ಸರ್ಕಾರ ನಿಯಂತ್ರಣ ಕೊಠಡಿ ಸಂಖ್ಯೆಗಳನ್ನು ಸಹ ನೀಡಿದೆ – +೯೧ ೭೯೯೭೯೫೯೭೫೪ ಮತ್ತು +೯೧ ೯೯೧೨೯೧೯೫೪೫ ಸಂಪರ್ಕ ಮಾಡಬಹುದು ಎಂದು ಹೇಳಿದೆ

ಬಸ್‌ನಲ್ಲಿದ್ದ ೪೨ ಮಂದಿ ಸಾವು


ಬಸ್ ಬೆಂಕಿ ಹೊತ್ತಿಕೊಂಡಾಗ ಅದರಲ್ಲಿ ೪೨ ಉಮ್ರಾ ಯಾತ್ರಿಕರಿದ್ದರು ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ ಅವರು ಹೇಳಿದ್ಧಾರೆ
ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ಅಬು ಮಾಥೇನ್ ಜಾರ್ಜ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಅಪಘಾತದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ


ಹೈದರಾಬಾದ್ ಮೂಲದ ಎರಡು ಏಜೆನ್ಸಿಗಳಾದ ಅಲ್-ಮೀನಾ ಹಜ್ ಮತ್ತು ಉಮ್ರಾ ಟ್ರಾವೆಲ್ಸ್ ಮೂಲಕ ಪ್ರಯಾಣಿಸಿದ ಸುಮಾರು ೧೬ ಉಮ್ರಾ ಯಾತ್ರಿಕರು ವಿನಾಶಕಾರಿ ಬಸ್ ಬೆಂಕಿಯಲ್ಲಿ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.


ಕೇಂದ್ರ ಸರ್ಕಾರ ಮೃತದೇಹಗಳನ್ನು ಭಾರತಕ್ಕೆ ತರಬೇಕು ಮತ್ತು ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ಸಂತಾಪ


ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ೪೨ ಮಂದಿ ಭಾರತೀಯರು ಮೃತಪಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ಸುದ್ಧಿ ತಿಳಿದು ಅತೀವ ನೋವಾಗಿದೆ. ಈ ಘೋರ ದುರಂತದಲ್ಲಿ ತಮ್ಮ ಪ್ರೀತಿ,ಪಾತ್ರರಿಂದ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ನೋವು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಎಕ್ಸ್ ಖಾತೆಯಲ್ಲಿ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.


ದುರಂತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ. ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹಾಗೂ ಜೆಡ್ಡಾದ ರಾಯಭಾರಿ ಕಚೇರಿಯೂ ಎಲ್ಲಾ ರೀತಿಯ ಸಹಾಯ ಮಾಡಲಿದೆ. ನಮ್ಮ ಅಧಿಕಾರಿಗಳು ಸೌದಿ ಅರೇಬಿಯಾದ ಅಧಿಕಾರಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.