೪೨ ಮಂದಿ ಆರೋಪಿಗಳು ಬಂಧನ; ೩.೦೨ ಕೋಟಿ ಮೌಲ್ಯದ ಮೊಬೈಲ್ ಗಳು ವಶ

ಬೆಂಗಳೂರು,ಅ.೨೯- ನಗರದ ವಿವಿಧ ವಿಭಾಗಗಳಲ್ಲಿ ಕಾರ್ಯಾಚರಣೆ ಕೈಗೊಂಡು ಮೊಬೈಲ್ ಕಳ್ಳತನ ಮಾಡುತ್ತಿದ್ದ ೪೨ ಮಂದಿ ಆರೋಪಿಗಳನ್ನು ಬಂಧಿಸಿ ೩.೦೨ ಕೋಟಿ ಮೌಲ್ಯದ ಮೊಬೈಲ್ ಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಜನಸಂದಣಿ ಪ್ರದೇಶಗಳಲ್ಲಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ದೇವಸ್ಥಾನಗಳ ಬಳಿ ಆರೋಪಿಗಳು ಎರಡು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು ಸರಣಿಯಾಗಿ ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದ ಮೈಸೂರು ರಸ್ತೆಯ ಆರು ಜನ ಮಂದಿ ಆರೋಪಿಗಳನ್ನು ಬಂಧಿಸಿ, ೬೦ ಲಕ್ಷ ಮೌಲ್ಯದ ೪೨೨ ಸ್ಮಾರ್ಟ್ ಮೊಬೈಲ್ ಗಳು ಕೃತ್ಯಕ್ಕೆ ಬಳಸುತ್ತಿದ್ದ ಆಟೋರಿಕ್ಷಾ ಡಿಯೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.


ಕಳೆದ ಮಾರ್ಚ್ ೨೦೨೪ ರಿಂದ ಇಲ್ಲಿಯವರೆಗೆ ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟಾರ್ (ಸಿಇಐಆರ್) ಪೋರ್ಟಲ್‌ನಲ್ಲಿ ಕಳೆದು ಹೋದ ಮೊಬೈಲ್ ಫೋನ್‌ಗಳ ಐಎಂಇಐ ನಂಬರ್ ಆಧಾರದ ಮೇಲೆ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ೮೯೪ ಸ್ಮಾರ್ಟ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಪೈಕಿ ೫೨೨ ಮೊಬೈಲ್ ಫೋನ್‌ಗಳನ್ನು ಮೂಲ ಮಾಲೀಕರಿಗೆ ಹಿಂತಿರುಗಿಸಲಾಗಿದ್ದು, ಉಳಿದ ೩೭೨ ಮೊಬೈಲ್ ಫೋನ್‌ಗಳು ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್‌ನಲ್ಲಿರುತ್ತವೆ. ಸಾರ್ವಜನಿಕರು ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿದಲ್ಲಿ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.


ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ ಫೈಓವರ್ ಕೆಳಗಿರುವ ಬಸ್ ನಿಲ್ದಾಣದ ಬಳಿ ಬೇರೊಂದು ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯು ತನ್ನ ಕರ್ತವ್ಯಕ್ಕೆ ತೆರಳುತ್ತಿದ್ದಾಗ, ಆ ಸ್ಥಳದಲ್ಲಿ ಕಿಯಾ ಕಂಪನಿಯ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗಮನಿಸಿದ್ದು, ಅದನ್ನು ಪರಿಶೀಲಿಸಲು ಸಿಬ್ಬಂದಿಯು ಕಾರಿನ ಬಳಿ ತೆರಳಿದಾಗ ಕಾರಿನಲ್ಲಿದ್ದವರು ಓಡಿ ಹೋಗಿರುತ್ತಾರೆ. ಸಿಬ್ಬಂದಿಯು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ೨೮ ವಿವಿಧ ಕಂಪನಿಯ ಮೊಬೈಲ್ ಫೋನ್‌ಗಳು ಪತ್ತೆಯಾಗಿರುತ್ತದೆ. ಇವುಗಳ ಮೌಲ್ಯ ರೂ. ೮ ಲಕ್ಷಗಳಾಗಿರುತ್ತದೆ.


ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣದಲ್ಲಿ ೧೨ ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು,ಅವುಗಳ ಮೌಲ್ಯ ರೂ. ೫ ಲಕ್ಷ ಗಳಾಗಿರುತ್ತದೆ.
ಇದರಿಂದ ಅಮೃತಹಳ್ಳಿ ಠಾಣೆಯಿಂದ ೪೦ ಮೊಬೈಲ್ ಗಳು ಮತ್ತು ಒಂದು ಕಾರು ಸೇರಿ. ೨೦ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ.


ಗಾಂಧಿನಗರ ಮೆಜೆಸ್ಟಿಕ್‌ನ ವೈ. ರಾಮಚಂದ್ರ ರಸ್ತೆಯಲ್ಲಿರುವ ಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಆರೋಪಿಗಳು ತಾವು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹಂತ ಹಂತವಾಗಿ ಕಳವು ಮಾಡಿದ್ದ ನಾಲ್ಕು ಲಕ್ಷ ಹತ್ತು ಸಾವಿರ ಬೆಲೆ ಬಾಳುವ ೯೦ ಮೊಬೈಲ್ ಗಳನ್ನು ವಶಪಡಿಸಿಕೊಂಡು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್ ಸಿ ರಸ್ತೆಯ ಗಣೇಶ ದೇವಾಲಯದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಇಬ್ಬರನ್ನು ಬಂಧಿಸಿ ೩೫ ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಸಿಗರೇಟ್ಸ್, ವಿದೇಶಿ ಸಿಗರೇಟ್ ಬಾಕ್ಸ್, ಪರ್ಫೂಮ್ಸ್‌ಗಳು, ೧೩ ಲ್ಯಾಪ್ ಟಾಪ್ ಮತ್ತು ೧೧ ಐಫೋನ್ ೧೭ ಪ್ರೋ ಮ್ಯಾಕ್ಸ್ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಉಪ್ಪಾರ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ದ್ವಿ-ಚಕ್ರ ವಾಹನದಲ್ಲಿ ಬಂದ ಆರೋಪಿಗಳಿಬ್ಬರು ಮಹಿಳೆಯಿಂದ ಮೊಬೈಲ್ ಕಸಿದು ಪರಾರಿಯಾಗಿದ್ದ ಓರ್ವ ಆರೋಪಿಯು ಮತ್ತೊಂದು ಪ್ರಕರಣದಲ್ಲಿ ಬಾಗಿಯಾಗಿ ಹಾಲಿ ನ್ಯಾಯಾಂಗ ಬಂಧನದಲ್ಲಿದ್ದವನನ್ನು ಬಾಡಿ ವಾರಂಟ್ ಮುಖಾಂತರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ೬,೭೫ ಲಕ್ಷ ಮೌಲ್ಯದ ೨೦ ಮೊಬೈಲ್ ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿ ಚಕ್ರ ವಾಹನವನ್ನು ವಿಜಯನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.


ವರ್ತೂರು ಗುಂಜೂರು ರಸ್ತೆಯಲ್ಲಿರುವ ಮೊಬೈಲ್ ಔಟ್‌ಲೆಟ್ ಅಂಗಡಿಯ ಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ ೪೦,೫೦ ಲಕ್ಷ ಮೌಲ್ಯದ ೩೯ ಮೊಬೈಲ್ ಫೋನ್‌ಗಳು, ೦೧ ಡಿಜಿಟಲ್ ಕ್ಯಾಮರಾ, ೦೧ ಡಿಜಿಟಲ್ ವಾಚ್ ಮತ್ತು ೮ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ದ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೈಋತ್ಯ ವಿಭಾಗದ ವಿವಿಧ ೭ ಪೊಲೀಸ್ ಠಾಣೆಗಳ ಸಿಇಐಆರ್ ಪೋರ್ಟಲ್‌ನಲ್ಲಿ ವರದಿಯಾಗಿದ್ದ ಮೊಬೈಲ್ ಫೋನ್‌ಗಳು ಮತ್ತು ಇತರೆ ಪ್ರಕರಣಗಳಲ್ಲಿ ೨೬ ಲಕ್ಷ ಮೌಲ್ಯದ ೨೨೪ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.


ರಾಮಮೂರ್ತಿನಗರ ಪೊಲೀಸ್ ಠಾಣೆಯ ೬ ಮೊಬೈಲ್ ಕಳವು ಪ್ರಕರಣಗಳನ್ನು ಪತ್ತೆ ಮಾಡಿ ೧,೮೦ ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡು ೧೧ಮಂದಿ ಆರೋಪಿಗಳನ್ನು ಬಂದಿಸಲಾಗಿದೆ. ಇದಲ್ಲದೆ ಸಿಇಐಆರ್. ಪೋರ್ಟಲ್‌ನಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ ೧೬೦ ಮೊಬೈಲ್‌ಗಳನ್ನು ಪತ್ತೆ ಮಾಡಿ, ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಲಾಗಿರುತ್ತದೆ.


ಬಾಣಸವಾಡಿ ಪೊಲೀಸರು ೬ ಮೊಬೈಲ್ ಕಳವು ಪ್ರಕರಣಗಳನ್ನು ಪತ್ತೆ ಮಾಡಿ, ೧೫ ಮೊಬೈಲ್‌ಗಳನ್ನು ವಶಕ್ಕೆ ಪಡಿಸಿಕೊಂಡರೆ,ಹೆಣ್ಣೂರು ಪೊಲೀಸರು ೧೫ ಮೊಬೈಲ್ ಗಳನ್ನು ವಶಪಡಿಸಿಕೊಂಡರೆ,
ಬೊಮ್ಮನಹಳ್ಳಿ ಪೊಲೀಸರು ಸಿಇಐಆರ್ ಪೋರ್ಟಲ್‌ನಲ್ಲಿ ವರದಿಯಾಗಿದ್ದ ೨೦ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.