
ಕಾಬೂಲ್,ಮಾ.೧೭- ಆಫ್ಘಾನಿಸ್ತಾನದ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಪಾಕಿಸ್ತಾನ ಹತ್ಯೆ ಮಾಡಿದ್ದು ಸಾವಿನ ಸಂಖ್ಯೆ ಕನಿಷ್ಠ ೪೦೦ ತಲುಪಿದೆ ಎಂದು ತಾಲಿಬಾನ್ ಸರ್ಕಾರದ ಮಾಹಿತಿ ನೀಡಿದೆ.
ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಔಷಧ ಚಿಕಿತ್ಸಾ ಕೇಂದ್ರದಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ನೂರಾರು ಸಾವು- ನೋವುಗಳು ಸಂಭವಿಸಿವೆ ಎಂದು ಹೇಳಲಾಗಿದ್ದು ಈವರೆಗೆ ಸುಮಾರು ೨,೦೦೦ ಜನರಿಗೆ ಅಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಫ್ಘಾನಿಸ್ತಾನದ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕಾಬೂಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ದಾಳಿ ನಡೆದಿದ್ದು, ಕೆಲವು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಆಫ್ಘಾನಿಸ್ತಾನ ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.
ಕಾಬೂಲ್ ಮತ್ತು ಪೂರ್ವ ಪ್ರಾಂತ್ಯದ ನಂಗಾಹಾರ್‌ನಲ್ಲಿರುವ “ಮಿಲಿಟರಿ ಸ್ಥಾಪನೆಗಳು ಮತ್ತು ಭಯೋತ್ಪಾದಕ ಬೆಂಬಲ ಮೂಲಸೌಕರ್ಯಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎನ್ನುವ ಆರೋಪವನ್ನು ಪಾಕಿಸ್ತಾನ ಸಾರಾಸಗಟಾಗಿ ತಿರಸ್ಕರಿಸಿದೆ.
ಸರ್ಕಾರದ ವಕ್ತಾರ ಶರಫತ್ ಜಮಾನ್ ಅಮರ್ಖೈಲ್ ಪ್ರತಿಕ್ರಿಯಿಸಿ ಆಸ್ಪತ್ರೆಯ ಬಳಿ ಯಾವುದೇ ಮಿಲಿಟರಿ ಸೌಲಭ್ಯಗಳಿಲ್ಲ , ಆದರೂ ಪಾಕಿಸ್ತಾನ ದಾಳಿ ನಡೆಸಿ ಅಮಾಯಕ ಜನರನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಕಾಬೂಲ್‌ನಾದ್ಯಂತ ದೊಡ್ಡ ಸ್ಫೋಟಗಳ ಶಬ್ದ ಕೇಳಿಬಂದಿದೆ, ನಂತರ ವಿಮಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಶಬ್ದ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬ ಸದಸ್ಯರು ಹೊರಗೆ ಜಮಾಯಿಸಿದ್ದು, ಆಸ್ಪತ್ರೆಯ ಮುಂಭಾಗದಲ್ಲಿ ಟೆಂಟ್‌ಗಳನ್ನು ಹಾಕಿಕೊಂಡು ಗಾಯಗೊಂಡ ರೋಗಿಗಳ ಸಂಬಂಧಿಕರು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ.
- ಪಾಕಿಸ್ತಾನ- ಆಫ್ಘಾನಿಸ್ತಾನದ ನಡುವೆ ಸಂಘರ್ಷ
- ಆಫ್ಘಾನಿಸ್ತಾನದ ಆಸ್ಪತ್ರೆ, ಔಷಧ ಕೇಂದ್ರಗಳ ಮೇಲೆ ಪಾಕ್ ದಾಳಿ
- ೪೦೦ಕ್ಕೂ ಹೆಚ್ಚು ಮಂದಿ ಸಾವು
- ೨೦೦೦ಕ್ಕೂ ಅಧಿಕ ಮಂದಿಗೆ ಗಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ
- ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
ಸುಳ್ಳಿನಿಂದ ಕೂಡಿದ ಮಾಹಿತಿ
ಅಫ್ಘಾನಿಸ್ತಾನ ಸರ್ಕಾರ ಮಾಡಿರುವ ಆರೋಪಗಳನ್ನು ಪಾಕಿಸ್ತಾನ ತಳ್ಳಿ ಹಾಕಿದ್ದು ಇದು ಸುಳ್ಳಿನಿಂದ ಕೂಡಿದ ಮಾಹಿತಿ ಎಂದು ಹೇಳಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಕಾನೂನುಬಾಹಿರ ಬೆಂಬಲ ಒಳಗೊಂಡಿರುವ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ವಿನಾಕಾರಣ ಆರೋಪ ಮಾಡುತ್ತಿದೆ ಎಂದಿದೆ.
ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಸಂಘರ್ಷ ಫೆಬ್ರವರಿಯಲ್ಲಿ ಮತ್ತೆ ಭುಗಿಲೆದ್ದಿದೆ. ಅಫ್ಘಾನಿಸ್ತಾನವು ಉಗ್ರಗಾಮಿ ಗುಂಪುಗಳಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು ಇದನ್ನು ತಾಲಿಬಾನ್ ಸರ್ಕಾರ ನಿರಾಕರಿಸಿದೆ.
ಫೆಬ್ರವರಿ ೨೬ ರಿಂದ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಗಡಿಯಾಚೆಗಿನ ಹೋರಾಟದ ಪರಿಣಾಮವಾಗಿ ಕನಿಷ್ಠ ೭೫ ಜನರು ಸಾವನ್ನಪ್ಪಿದ್ದಾರೆ ಮತ್ತು ೧೯೩ ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ ತಿಳಿಸಿದೆ.
ಪಾಕ್ ದಾಳಿ ಭಾರತ ಖಂಡನೆ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಆಸ್ಪತ್ರೆಯ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಖಂಡಿಸಿ ಇದು ಅನಾಗರಿಕ ಹಾಗೂ ಹೇಡಿತನದ ಕೃತ್ಯ ಎಂದು ಕಿಡಿಕಾರಿದೆ.
ಆಸ್ಪತ್ರೆಯ ಮೇಲಿನ ದಾಳಿಯು ಪಾಕಿಸ್ತಾನದ ಘೋರ ಆಕ್ರಮಣಕಾರಿ ಕೃತ್ಯ. ಅಫ್ಘಾನಿಸ್ತಾನದ ಸಾರ್ವಭೌಮತ್ವದ ಮೇಲಿನ ದಾಳಿ. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ ಎಂದು ವಿದೇಶಾಂಗ ಸಚಿವಾಲಯ ಆಕ್ರೋಶ ಹೊರಹಾಕಿದೆ.
ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯಗಳಲ್ಲಿ ಶಾಂತಿ, ಆತ್ಮಾವಲೋಕನ ಮತ್ತು ಕರುಣೆಯ ಸಂದರ್ಭವಾದ ಪವಿತ್ರ ರಂಜಾನ್ ತಿಂಗಳಲ್ಲಿ ಈ ದಾಳಿ ನಡೆದಿರುವುದು ಖಂಡನೀಯ. ಆಸ್ಪತ್ರೆ ಮತ್ತು ಅದರ ರೋಗಿಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಳ್ಳುವುದನ್ನು ಸಮರ್ಥಿಸುವ ನೈತಿಕತೆ ಅವರಿಗಿಲ್ಲ ಎಂದು ಹೇಳಿದೆ.





























