
ಕಲಬುರಗಿ,ಮಾ.17: ಹೊರಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು 1 ಲಕ್ಷ ರೂ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳಿಗೆ ತಲಾ 4 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಜಿಲ್ಲೆಯ ಎಂಎಸ್‍ಐಎಲ್ ಕಚೇರಿಯ ಶಾಖಾ ವ್ಯವಸ್ಥಾಪಕರಾಗಿದ್ದ ಬಿ.ಕೃಷ್ಣಮೂರ್ತಿ ಹಾಗೂ ಡಿಎಲ್‍ಒ ಆಗಿದ್ದ ಚಂದ್ರಶೇಖರ ಸಲಕೆ ಶಿಕ್ಷೆಗೆ ಗುರಿಯಾದವರು.
ಶಹಾಬಾದ್ ಎಂಎಸ್‍ಐಎಲ್‍ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಸಿದ್ಧಲಿಂಗ ಗುಂಡಗೊಂಡ ಎಂಬುವರಿಗೆ 1 ಲಕ್ಷ ರೂ.ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಅದರಲ್ಲಿ 50 ಸಾವಿರ ರೂ.ಲಂಚ ಪಡೆದ ಕೃಷ್ಣಮೂರ್ತಿ ಅದನ್ನು ಚಂದ್ರಶೇಖರಗೆ ನೀಡಿದ್ದರು. ಈಕುರಿತು ಡಿವೈಎಸ್ಪಿ ಸುಧಾ ಆದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಬಳಿಕ ಇನ್‍ಸ್ಪೆಕ್ಟರ್ ಮಹಮ್ಮದ್ ಇಸ್ಮಾಯಿಲ್ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಪಟ್ಟಿ
ಪ್ರಕರಣದ ನಡೆಸಿದ ವಿಚಾರಣೆ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯ ದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀ ನಾರಾಯಣ ಅವರು, ಇಬ್ಬರೂ ಅಧಿಕಾರಿಗಳ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ಘೋಷಿಸಿದರು. ಉಭಯ ಅಧಿಕಾರಿಗಳಿಗೆ ತಲಾ 4 ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಶೋಕ ಎಸ್. ಚಾಂದಕವಠೆ ವಾದ ಮಂಡಿಸಿದ್ದರು.



























