
ಇಸ್ಲಾಮಾಬಾದ್, ಸೆ. ೨೨- ಪಾಕಿಸ್ತಾನದ ವಾಯುಪಡೆ ನಡೆಸಿರುವ ವೈಮಾನಿಕ ದಾಳಿಯಲ್ಲಿ ೩೦ ಮಂದಿ ನಾಗರಿಕರು ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ವಾಯುಪಡೆ ಆಫ್ಘಾನಿಸ್ತಾನದ ಗಡಿಯಲ್ಲಿ ಖೈಬರ್ ಪಂಖುತ್ವಾ ಗ್ರಾಮದ ಮೇಲೆ ಉಗ್ರರಿದ್ದಾರೆ ಎಂದು ೮ ಬಾಂಬ್‌ಗಳನ್ನು ಹಾಕಿದ್ದು, ಈ ಬಾಂಬ್ ದಾಳಿಯಲ್ಲಿ ಕನಿಷ್ಠ ೩೦ ಮಂದಿ ಗ್ರಾಮಸ್ಥರು ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ.
ಇಂದು ಬೆಳಿಗ್ಗೆ ಖೈಬರ್ ಪಂಖುತ್ವಾ ಗ್ರಾಮದಲ್ಲಿ ತೆಹರಿಕ್-ಎ-ತಾಲಿಬಾನ್ ಉಗ್ರರ ಅಡಗು ತಾಣಗಳ ಮೇಲೆ ಪಾಕಿಸ್ತಾನದ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದ್ದು, ಈ ಬಾಂಬ್ ದಾಳಿಯಲ್ಲಿ ಉಗ್ರರ ಬದಲು ನಾಗರಿಕರೇ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ವಾಯುಪಡೆ ನಡೆಸಿರುವ ಬಾಂಬ್ ದಾಳಿಯ ಪರಿಸ್ಥಿತಿಯ ಬಗ್ಗೆ ಸ್ಪಷ್ಟ ಚಿತ್ರಣಗಳು ಸಿಗಬೇಕಿದೆ. ಉಗ್ರರ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ವಾಯುಪಡೆ ಹೇಳಿದ್ದರೂ ವಾಯುಪಡೆಯ ಬಾಂಬ್ ದಾಳಿಯಲ್ಲಿ ಸತ್ತವರೆಲ್ಲರೂ ನಾಗರಿಕರೆ ಆಗಿದ್ದಾರೆ.
ಖೈಬರ್ ಪಂಖುತ್ವಾ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರ ಶವಗಳು ಬಿದ್ದಿರುವ ಚಿತ್ರಗಳು ದೊರೆತಿದ್ದು, ನಾಗರಿಕರೇ ಬಾಂಬ್ ದಾಳಿಯಲ್ಲಿ ಮೃತಪಟ್ಟಿರುವುದು ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ.
ಖೈಬರ್ ಪಂಖುತ್ವಾ ಗ್ರಾಮದಲ್ಲಿ ಪಾಕ್ ಸೇನಾಪಡೆ ಭಯೋತ್ಪದನಾ ನಿಗ್ರಹ ಕಾರ್ಯಾಚರಣೆಯನ್ನು ಈ ಹಿಂದೆಯೂ ನಡೆಸಿದ್ದು, ಆ ಸಂದರ್ಭದಲ್ಲಿ ನಾಗರಿಕರ ಸಾವಿನ ವರದಿಗಳು ವರದಿಯಾಗಿತ್ತು.
ಜೂನ್‌ನಲ್ಲಿ ಪಾಕ್ ಸೇನಾ ಪಡೆ ನಡೆಸಿದ್ದ ಡ್ರೋಣ್ ದಾಳಿಯಲ್ಲಿ ನಾಗರಿಕರು ಮೃತಪಟ್ಟಿದ್ದರುವುದು ಪಾಕಿಸ್ತಾನದ ಆಡಳಿತ ನಾಗರಿಕರ ಜೀವನದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಸೂಚಿಸುತ್ತದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.
ಖೈಬರ್ ಪಂಖುತ್ವಾದಲ್ಲಿನ ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಪಾಕಿಸ್ತಾನದ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಪ್ರಾಂತ್ಯದಲ್ಲಿ ಸೇನಾಪಡೆಗಳ ಡ್ರೋಣ್ ದಾಳಿಗೆ ನಾಗರಿಕರು ಜೀವ ತೆತ್ತುತ್ತಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ದಕ್ಷಿಣಾ ಏಷ್ಯಾದ ಉಪನಿರ್ದೇಶಕಿ ಇಸಾಬೆಲ್ಲೆ ಹೇಳಿದ್ದಾರೆ.