
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,12- ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದುಡಿಸಿಕೊಳ್ಳುತ್ತಿದ್ದ 18 ವರ್ಷದೊಳಗಿನ 89 ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಿಸಲಾಗಿದೆಂದು
ಜಿಲ್ಲೆಯ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ್ ಹೇಳಿದ್ದಾರೆ.
ಬಾಲ ಕಾರ್ಮಿಕದಿನಾಚರಣೆ ಅಂಗವಾಗಿ ಇಂದು ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಾಕಷ್ಟು ಉದ್ದಿಮೆಗಳಿವೆ, ಅಲ್ಲದೆ ನಗರ ಪ್ರದೇಶದಉದ್ಯಮ ಮತ್ತು ಹೊಟೇಲ್ ಗಳಲ್ಲಿ ಬಾಲಕಾರ್ಮಿಕ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ ಜಿಲ್ಲೆಯಲ್ಲಿ ಶಾಲೆಯನ್ನು ಮಧ್ಯದಲ್ಲಿಯೇ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಿರುವುದು ಕಾರಣ ಆಗಿದೆ.
ಪ್ರತಿ ತಿಂಗಳು ನಮ್ಮ ಕಾರ್ಯತಂಡ (ಟಾಸ್ಕ್ ಪೋರ್ಸ್) ಆಯಾ ತಾಲೂಕುಗಳಲ್ಲಿ ತಹಸಿಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಅನಿರೀಕ್ಷಿತ ದಾಳಿಗಳನ್ನು ನಡೆಸಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗುತ್ತಿದೆ.
14 ವರ್ಷ ಮೇಲ್ಪಟ್ಟ 18 ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ದುಡಿಯುತ್ತಿರವುದು ಕಂಡು ಬರುತ್ತಿದೆಂದರು.
ದಾಳಿಗಳ ಮೂಲಕ ರಕ್ಷಣೆ ಮಾಡಿರುವ 89 ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಒಪ್ಪಿಸಿದೆ. ಸಮಿತಿಯು ಮಕ್ಕಳನ್ನು ದುಡಿಸಿಕೊಂಡ ಮಾಲೀಕರಿಂದ ವಸೂಲಿ ಮಾಡಿದ 20 ಸಾವಿರ ರೂ ದಂಡ ಮತ್ತು ಸರ್ಕಾರದ 15 ಸಾವಿರ ರೂ ಸೇರಿಸಿ ಡಿಸಿ ಮತ್ತು ಮಕ್ಕಳ ಹೆಸರಲ್ಲಿ ಇಡುಗಂಟು ಇಟ್ಟಿದೆ. ಅದನ್ನು ಮಕ್ಕಳಿಗೆ 18 ವರ್ಷ ತುಂಬಿದ ನಂತರ ಶಿಕ್ಷಣದ ಅನುಕೂಲಕ್ಕೆ ಅವರ ಪಾಲಕ ಪೋಷಕರಿಗೆ ನೀಡಲಿದೆ. ಈ ರೀತಿ ಈಗಾಗಲೇ ಹತ್ತು ಮಕ್ಕಳಿಗೆ ಈ ಸೌಲಭ್ಯ ಒದಗಿಸಿದೆಂದಿದ್ದಾರೆ.
ಮಕ್ಕಳನ್ನು ದುಡಿಸಿಕೊಂಡ ಮಾಲೀಕರ ವಿರುದ್ದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ.
ಅನಿಷ್ಟವಾದ ಈ ಬಾಲ ಕಾರ್ಮಿಕ ಪದ್ದತಿಯನ್ನು ಹೋಗಲಾಡಿಸಲು ಬೀದಿ ನಾಟಕ, ಕರಪತ್ರ ಹಂಚಿಕೆ, ಪೋಸ್ಟರ್ ಗಳ ಪ್ರದರ್ಶನ, ಪಾಲಕ ಪೋಷಕರ, ಉದ್ದಿಮೆಗಳ ಮಾಲೀಕರ, ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆಂದು ಹೇಳಿದ್ದಾರೆ.
