
ಕುಣಿಗಲ್, ಅ. 7- ಸೀಗೆ ಹುಣ್ಣಿಮೆ ದಿನವಾದ ಇಂದು ಕುಣಿಗಲ್ ತಾಲ್ಲೂಕಿನ ಜನರ ಪಾಲಿಗೆ ಕರಾಳ ದಿನವಾಗಿದ್ದು, ತಾಲ್ಲೂಕಿನಲ್ಲಿ ಸಂಭವಿಸಿದ ಎರಡು ಭೀಕರ ದುರಂತದಲ್ಲಿ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲ್ಲೂಕಿನ ಮಾರ್ಕೋನಹಗಳ್ಳಿ ಜಲಾಶಯದಲ್ಲಿ 6 ಮಂದಿ ಜಲಸಮಾಧಿ ಹಾಗೂ ಹುಲಿಯೂರುದುರ್ಗ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ಮಂದಿ ಸೇರಿ ಸೀಗೆ ಹುಣ್ಣಿಮೆ ದಿನವಾದ ಇಂದು 9 ಮಂದಿ ಸಾವನ್ನಪ್ಪಿದ್ದಾರೆ.
ತುಮಕೂರಿನ ಬಿ.ಜಿ.ಪಾಳ್ಯ ನಿವಾಸಿಗಳಾದ 7 ಮಂದಿ ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯದಲ್ಲಿರುವ ನೆಂಟರ ಮನೆಗೆ ಹೋಗಿದ್ದರು. ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿ ಇಂದು ಸಂಜೆ ಮಾರ್ಕೋನಹಳ್ಳಿ ಜಲಾಶಯ ನೋಡಲು 7 ಮಂದಿಯು ತೆರಳಿದ್ದರು.
ಮಾರ್ಕೋನಹಳ್ಳಿ ಸೈ ಫೋನ್ ಬಳಿ 7 ಜನರು ಸೈಫರ್ ಬಳಿ ಈಜಾಡುತ್ತಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಈ ಪೈಕಿ ಸಾಜಿಯಾ (32), ಅರ್ಬಿನ್ (30) ಎಂಬುವರ ಶವಗಳು ಪತ್ತೆಯಾಗಿದ್ದು, ತಬಾಸುಮ್ (45), ಶಬಾನ (44), ಮಿಫ್ರಾ (4) ಹಾಗೂ ಮಹಿಮ್ (1) ಎಂಬುವರು ಕಣ್ಮರೆಯಾಗಿದ್ದಾರೆ. ಇವರ ಜತೆಗಿದ್ದ ನವಾಜ್ ಎಂಬಾತ ಜಲಾಶಯದ ಗಿಡದ ಪೊದೆಯಲ್ಲಿ ಸಿಲುಕಿಕೊಂಡಿದ್ದು, ತಲೆ ಇತರೆ ಭಾಗಗಳಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ 7 ಮಂದಿಯು ಮಾರ್ಕೋನಹಳ್ಳಿ ಜಲಾಶಯದ ಹಿನ್ನೀರಿನ ಕಾಲುವೆಗೆ ಇಳಿದಿದ್ದು, ಆ ಸಂದರ್ಭದಲ್ಲಿ ಆಟೋಮ್ಯಾಟಿಕ್ ಆಗಿ ಸೈಫನ್ ಸಿಸ್ಟಂಗಳು ಓಪನ್ ಆಗಿದ್ದರಿಂದ ನೀರಿನ ಹರಿವು ಹೆಚ್ಚಾಗಿ ರಭಸವಾಗಿ ಹರಿದಿದ್ದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಶಂಕಿಸಲಾಗಿದೆ.
ಜಲಾಶಯದಲ್ಲಿ ಕಣ್ಮರೆಯಾಗಿರುವ ನಾಲ್ವರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೀಕರ ಅಪಘಾತ: ಮೂವರ ಸಾವು

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರಿನಿಂದ ಸೋಮವಾರಪೇಟೆಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ-85 ರ ಸುಗ್ಗನಹಳ್ಳಿ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಉಂಗ್ರ ಗ್ರಾಮದ ಹುಚ್ಚೆಗೌಡ (60), ನಿಂಗಮ್ಮ (55) ಹಾಗೂ ಮೊಮ್ಮಗ ಪ್ರೀತಮ್ (11) ಎಂದು ಗುರುತಿಸಲಾಗಿದೆ.
ಉಂಗ್ರ ಗ್ರಾಮದಿಂದ ಹುಲಿಯೂರುದುರ್ಗದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಸುಗ್ಗನಹಳ್ಳಿ ಗ್ರಾಮದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿ ಕಾರಣದಿಂದ ಏಕಮುಖ ಸಂಚಾರ ಕಲ್ಪಿಸಲಾಗಿತ್ತು. ಈ ವೇಳೆ ಕಾರನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಹುಚ್ಚೇಗೌಡ ಹಾಗೂ ಪ್ರೀತಮ್ ಸ್ಥಳದಲ್ಲೇ ಸಾವನ್ನಪ್ಪಿದರೆ, ತೀವ್ರವಾಗಿ ಗಾಯಗೊಂಡಿದ್ದ ನಿಂಗಮ್ಮ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಅಮೃತೂರು ಪಿಎಸ್ಐ ಮಾಧ್ಯನಾಯಕ್, ಕುಣಿಗಲ್ ಸಿಪಿಐ ನವೀನ್‌ಗೌಡ ಹಾಗೂ ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.