Home ಜಿಲ್ಲೆ ಕಲಬುರಗಿ ವಿದ್ಯುತ್ ಅಪಘಾತಕ್ಕೊಳಗಾದ ವ್ಯಕ್ತಿಗೆ 2 ಲಕ್ಷ ಪರಿಹಾರ: ಶಾಸಕರ ಪ್ರಯತ್ನ ಫಲಕಾರಿ

ವಿದ್ಯುತ್ ಅಪಘಾತಕ್ಕೊಳಗಾದ ವ್ಯಕ್ತಿಗೆ 2 ಲಕ್ಷ ಪರಿಹಾರ: ಶಾಸಕರ ಪ್ರಯತ್ನ ಫಲಕಾರಿ

ಕಲಬುರಗಿ:ಮೇ.7: ಕಲಬುರಗಿ ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರ ಪರಿಶ್ರಮದಿಂದ ವಿದ್ಯುತ್ ಅಪಘಾತದಲ್ಲಿ ಎರಡು ಕೈಗಳನ್ನು ಕಳೆದುಕೊಂಡ ವ್ಯಕ್ತಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಿಂದ ಪರಿಹಾರ ದೊರಕಿದೆ.
ನಗರದ ಬ್ರಹ್ಮಪುರ ನಿವಾಸಿಯಾದ ಸದಾಶಿವ ತಂದೆ: ಸಿದ್ದಾರೂಡ ಪೂಜಾರಿ ಅವರು ಕೆಇಬಿ ಒರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಈ ಕುರಿತು ಹಲವು ವರ್ಷಗಳಿಂದ ಪರಿಹಾರಕ್ಕಾಗಿ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇವರ ಸಂಕಷ್ಟವನ್ನು ಅರಿತ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮುಖ್ಯಮಂತ್ರಿ ವಿಶೇಷ ಅನುದಾನದಡಿ 2 ಲಕ್ಷ ರೂಪಾಯಿಗಳ ಪರಿಹಾರ ಮಂಜೂರು ಮಾಡಿದ್ದಾರೆ.
ಈ ಮೊತ್ತದ ಚೆಕ್ಕನ್ನು ಶಾಸಕರು ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಫಲಾನುಭವಿಗೆ ವಿತರಿಸಿ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ನಿವೃತ್ತ ಆಹಾರ ಇಲಾಖೆಯ ಅಧಿಕಾರಿ ಡಿ.ಬಿ. ಪಾಟೀಲ್, ಶಿವಾಜಿ ಪೂಜಾರಿ, ಶಾಂತು ಪಾಟೀಲ್, ನಾಗೇಶ್ ಡಿ. ಮುಚ್ಬೇಡ, ಮಲ್ಲಿಕಾರ್ಜುನ್ ವಿಶ್ವಕರ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.