ನಾಲ್ಕು ರಾಜ್ಯಗಳ 16 ತಂಡಗಳು ಭಾಗಿ ಆರ್.ಕೆ. ಅಂತರರಾಜ್ಯ ಫುಟ್‍ಬಾಲ್ ಟೂರ್ನಿ ಆರಂಭ

ಬೀದರ್: ಜ.25:ಜಾಸ್ಮಿನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ವತಿಯಿಂದ ಹಮ್ಮಿಕೊಳ್ಳಲಾದ ಮೂರು ದಿನಗಳ ಆರ್.ಕೆ. ಅಂತರರಾಜ್ಯ ಹಗಲು-ರಾತ್ರಿ ಫುಟ್‍ಬಾಲ್ ಟೂರ್ನಿ(ಸೆವೆನ್ ಪ್ಲೆಯರ್ಸ್) ಇಲ್ಲಿಯ ಬಿಲಾಲ್ ಕಾಲೊನಿಯಲ್ಲಿ ಇರುವ ಇನ್‍ಸ್ಟಿಟ್ಯೂಷನ್ಸ್ ಮೈದಾನದಲ್ಲಿ ಶುಕ್ರವಾರ ಸಂಜೆ ಆರಂಭಗೊಂಡಿತು.
ಜಾಸ್ಮಿನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಅಧ್ಯಕ್ಷ ಅಜಿಜ್ ಖಾನ್ ಅವರು ಟೂರ್ನಿಗೆ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಫುಟ್‍ಬಾಲ್ ಆಟಕ್ಕೆ ಉತ್ತೇಜನ ನೀಡಲು ಇನ್‍ಸ್ಟಿಟ್ಯೂಷನ್ಸ್ ವತಿಯಿಂದ ಪ್ರತಿ ವರ್ಷ ಟೂರ್ನಿ ಹಮ್ಮಿಕೊಳ್ಳುತ್ತಾ ಬರಲಾಗಿದೆ. ಈ ಬಾರಿಯ ಟೂರ್ನಿ ನಾಲ್ಕನೇ ಆವೃತ್ತಿಯದ್ದಾಗಿದೆ ಎಂದು ಅವರು ತಿಳಿಸಿದರು.
ಟೂರ್ನಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳ ರಾಜ್ಯಗಳ ಒಟ್ಟು 16 ತಂಡಗಳು ಭಾಗಿಯಾಗಿವೆ. ಟೂರ್ನಿಯ ವಿಜೇತ ತಂಡಕ್ಕೆ ರೂ. 30 ಸಾವಿರ ನಗದು ಹಾಗೂ ಟ್ರೋಫಿ ಮತ್ತು ರನ್ನರ್ ಅಪ್ ತಂಡಕ್ಕೆ ರೂ. 20 ಸಾವಿರ ನಗದು ಹಾಗೂ ಟ್ರೋಫಿ ದೊರೆಯಲಿದೆ. ಸರಣಿ ಪುರುಷೋತ್ತಮ ಹಾಗೂ ಉತ್ತಮ ಗೋಲ್‍ಕೀಪರ್ ಪ್ರಶಸ್ತಿಗಳೂ ಇವೆ ಎಂದು ಹೇಳಿದರು.
ಫುಟ್‍ಬಾಲ್ ಆಡುವುದರಿಂದ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಿದೆ. ಹೀಗಾಗಿ ಜಿಲ್ಲೆಯ ಯುವಕರು ಫುಟ್‍ಬಾಲ್ ಕ್ರೀಡೆಯತ್ತ ಒಲವು ತೋರಬೇಕು ಎಂದು ಸಲಹೆ ಮಾಡಿದರು.
ಫುಟ್‍ಬಾಲ್ ಕ್ರೀಡೆಯಲ್ಲಿ ಸಾಧನೆಗೆ ಅವಕಾಶ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬಹುದಾಗಿದೆ ಎಂದು ಹೇಳಿದರು.
ಡಾ. ರಾಜಶೇಖರ ಸೇಡಂಕರ್, ಗಾಂಧಿಗಂಜ್ ಸಿಪಿಐ ಆನಂದ, ರಾಷ್ಟ್ರಮಟ್ಟದ ಹಿರಿಯ ಫುಟ್‍ಬಾಲ್ ಆಟಗಾರ ಆಶೀಶ್ ನಿಯೋಲ್, ಹಿರಿಯ ಫುಟ್‍ಬಾಲ್ ಆಟಗಾರರಾದ ಆಖಿರ್ ಖಾದ್ರಿ, ಅಸ್ಲಂ ಖಾದ್ರಿ ಮತ್ತಿತರರು ಇದ್ದರು.