Home ಮುಖಪುಟ ಸುದ್ದಿ ಪುಣ್ಯಪುರುಷನ ೧೧೯ನೇ ಜಯಂತಿ: ಭಕ್ತರ ಗುರುವಂದನೆ

ಪುಣ್ಯಪುರುಷನ ೧೧೯ನೇ ಜಯಂತಿ: ಭಕ್ತರ ಗುರುವಂದನೆ

ತುಮಕೂರು, ಏ. ೧- ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡಿ ಅವರ ಬದುಕಿಗೆ ಬೆಳಕಾಗಿದ್ದ ಕಾಯಕ ಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀಮಠದಲ್ಲಿಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


೧೨ನೇ ಶತಮಾನದ ಬಸವಣ್ಣನವರ ತತ್ವಾದರ್ಶಗಳನ್ನು ಚಾಚೂ ತಪ್ಪದೇ ಪಾಲನೆ ಮಾಡುತ್ತಾ ಸಮಾಜದ ಉದ್ಧಾರಕ್ಕೆ ಸದಾ ತುಡಿಯುತ್ತಿದ್ದ ಆಧುನಿಕ ಬಸವಣ್ಣ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜಯಂತಿಗೆ ವಿವಿಧ ಮಠಾಧೀಶರು, ಹರಗುರುಚರಮೂರ್ತಿಗಳು, ಗಣ್ಯಾತಿ ಗಣ್ಯರು ಹಾಗೂ ಸಹಸ್ರಾರು ಭಕ್ತಗಣ ಸಾಕ್ಷಿಯಾದರು.


ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್, ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್, ರಾಜ್ಯ ಸರ್ಕಾರದ ನವೆದಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಅವರು ಶ್ರೀಗಳ ಗದ್ದುಗೆ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.


ಗದ್ದುಗೆಯಲ್ಲಿ ಮೊಳಗಿದ ಮಂತ್ರ ಘೋಷಗಳು


ನಾಡಿನ ಭಕ್ತಾದಿಗಳ ಮನ ಮನೆಗಳ ದೈವೀ ಪ್ರಭೆಯಾಗಿದ್ದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರವನ್ನು ಬಗೆ ಬಗೆಯ ಪುಷ್ಪಗಳಿಂದ ಸಿಂಗಾರಗೊಳಿಸಲಾಗಿತ್ತು.


ಶ್ರೀಗಳ ಗದ್ದುಗೆಯನ್ನು ಸಹ ಬಗೆ ಬಗೆಯ ಹೂವು, ಹಣ್ಣುಗಳಿಂದ ಅಲಂಕರಿಸಿದ್ದು, ಮುಂಜಾನೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು, ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ, ಭಜನಾ ಮಂತ್ರ ಘೋಷಗಳು ಮೊಳಗಿದವು.


ಶ್ರೀಗಳ ಗದ್ದುಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಹರಗುರುಚರಮೂರ್ತಿಗಳ ಸಮ್ಮುಖದಲ್ಲಿ ರುದ್ರಾಭಿಷೇಕ, ೧೦೮ ಅಷ್ಟೋತ್ತರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ, ಮಹಾಮಂಗಳಾರತಿ ನೆರವೇರಿಸಲಾಯಿತು.


ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಎಂದಿನಂತೆ ನಸುಕಿನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿ ಪರಮ ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸುವ ಮೂಲಕ ಆಶೀರ್ವಾದ ಪಡೆದರು. ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿಯವರು ವಿವಿಧ ಬಗೆಯ ಹಣ್ಣುಗಳು, ಪುಷ್ಪಗಳಿಂದ ಅಲಂಕರಿಸಿದ್ದ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಭಕ್ತಿ ಸಮರ್ಪಿಸಿದರು.


ಪುತ್ಥಳಿ ಮೆರವಣಿಗೆ


ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜಯಂತಿ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಗದ್ದುಗೆ ಮಂದಿರದ ಮುಂಭಾಗದಿಂದ ಆರಂಭವಾದ ಶ್ರೀಗಳ ಕಂಚಿನ ಪುತ್ಥಳಿ ಹೊತ್ತ ರುದ್ರಾಕ್ಷಿ ಮಂಟಪದ ಮೆರವಣಿಗೆಗೆ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.


ಮೆರವಣಿಗೆಯುದ್ಧಕ್ಕೂ ನಂದಿಧ್ವಜ ಕುಣಿತ, ಕರಡಿ ವಾದ್ಯ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.
ಶ್ರೀಮಠದ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ೧೧೯ ಪೂರ್ಣಕುಂಭ ಕಳಸ ಹೊತ್ತ ಸುಮಂಗಲಿಯರು, ಹರಗುರುಚರಮೂರ್ತಿಗಳು, ಕಿರಿಯ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಭಕ್ತಾದಿಗಳು, ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.


ದಾಸೋಹ ಸವಿದ ಭಕ್ತರು


ಶ್ರೀಕ್ಷೇತ್ರದಲ್ಲಿ ಎಂದಿನಂತೆ ಶ್ರೀಗಳ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ೬ ಕಡೆ ವಿಶೇಷ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.


ಶ್ರೀಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತ ಸಮೂಹಕ್ಕೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಶ್ರೀಕ್ಷೇತ್ರದ ೬ ಕಡೆ ಮಹಾಪ್ರಸಾದದ ವಿನಿಯೋಗ ನಡೆಯುತ್ತಿದ್ದು, ಮಧ್ಯಾಹ್ನ ಊಟಕ್ಕೆ ಸಿಹಿ ಬೂಂದಿ, ಖಾರ ಬೂಂದಿ, ಚಿತ್ರಾನ್ನ, ಪಲ್ಯ, ಕೋಸಂಬರಿ, ಅನ್ನ ಸಾಂಬರು, ಪಾಯಸ, ಮಜ್ಜಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗಿತ್ತು.

ತುಮಕೂರಿನ ಸಿದ್ದಗಂಗಾ ಮಠದಲ್ಲಿಂದು ನಡೆದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ರಾಜ್ಯ ಸಚಿವರಾದ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಲಕ್ಷ್ಮೀಹೆಬ್ಬಾಳ್ಕರ್, ಶಾಸಕರಾದ ಜ್ಯೋತಿಗಣೇಶ್, ಸುರೇಶ್‌ಗೌಡ ಭಾಗವಹಿಸಿದ್ದರು.


ಇನ್ನು ರಾತ್ರಿ ಊಟಕ್ಕೂ ಸಹ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದ್ದು, ೧ ಲಕ್ಷಕ್ಕೂ ಅಧಿಕ ಮಂದಿ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ನಾಡಿನಾದ್ಯಂತ ಆಗಮಿಸಿದ್ದ ಭಕ್ತಾದಿಗಳು ಶ್ರೀಕ್ಷೇತ್ರದ ಪ್ರಸಾದವನ್ನು ಸೇವಿಸಿ ಪುನೀತರಾದರು.

ಹರಿದು ಬಂದ ಭಕ್ತ ಸಾಗರ…


ಕಲ್ಪತರುನಾಡಿನ ಮುಕುಟಮಣಿ ಸಿದ್ದಗಂಗೆಯಲ್ಲಿ ಮನೆ ಮಾಡಿದ್ದ ಸಡಗರ ಸಂಭ್ರಮ… ಹಸಿವು ತಣಿಸಿದ ದಾಸೋಹ.. ದಾಹ ನೀಗಿಸಿದ ನೀರು… ಮಜ್ಜಿಗೆ… ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಗಾರ… ನಾಡಿನ ವಿವಿಧೆಡೆಯಿಂದ ಹರಿದು ಬಂದ ಭಕ್ತ ಸಾಗರ…


ತುಮಕೂರು ನಗರಕ್ಕೆ ಅಣತಿಯ ದೂರದಲ್ಲಿರುವ ಸಿದ್ದಗಂಗಾ ಕ್ಷೇತ್ರದಲ್ಲಿಂದು ನಡೆದ ಅಭಿನವ ಬಸವಣ್ಣ, ತ್ರಿವಿಧ ದಾಸೋಹಮೂರ್ತಿ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ೧೧೯ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದಲ್ಲಿ ಕಂಡು ಬಂದ ಹೈಲೆಟ್ಸ್ .


ಶ್ರೀಕ್ಷೇತ್ರಕ್ಕೆ ಬಳ್ಳಾರಿ, ವಿಜಯಪುರ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂದಿದ್ದು, ಕ್ಯಾತ್ಸಂದ್ರ ಹಾಗೂ ಬಂಡೆಪಾಳ್ಯದಿಂದ ಶ್ರೀಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕಣ್ಣಾಯಿಸಿದುದ್ದಕ್ಕೂ ಜನಸಾಗರದ್ದೇ ಕಾರುಬಾರು.