೨೩ ವರ್ಷಗಳಿಂದ ರಸ್ತೆಗಾಗಿ ಪರದಾಡುತ್ತಿದೆ ಬಡಕುಟುಂಬ ಸ್ಪಂದಿಸದಿದ್ದರೆ ಉಗ್ರಹೋರಾಟ-ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಎಚ್ಚರಿಕೆ

ಪುತ್ತೂರು; ಪರಿಶಿಷ್ಟ ಪಂಗಡದ ಈ ಮನೆಗೆ ಕಳೆದ ೨೩ ವರ್ಷಗಳಿಂದ ರಸ್ತೆ ಇಲ್ಲ. ಮನೆಯಲ್ಲಿ ಅಸೌಖ್ಯ ಉಂಟಾದರೆ ಅವರನ್ನು ಎತ್ತಿಕೊಂಡು ಹೋಗಬೇಕು. ಜನಪ್ರತಿನಿಧಿಗಳಿಗೆ ರಸ್ತೆಗಾಗಿ ದುಂಬಾಲುಬಿದ್ದು ಸಾಕಾಗಿದೆ. ಅಧಿಕಾರಿಗಳ ಕಾಲು ಹಿಡಿದರೂ ಪ್ರಯೋಜನವಾಗಿಲ್ಲ. ಇದು ದಕ ಜಿಲ್ಲೆಯ ಕುಟುಂಬವೊಂದರ ನೋವಿನ ಕಥೆ. ಇದನ್ನು ಅಂಬೇಡ್ಕರ್ ತತ್ವರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ಅವರು ಮಾದ್ಯಮಗಳ ಮುಂದೆ ಬಿಚ್ಚಿಟ್ಟರು.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ನೀರಕಜೆ ಎಂಬಲ್ಲಿನ ಚೆನ್ನಪ್ಪ ನಾಯ್ಕ ಅವರ ಪತ್ನಿ ಜಾನಕಿಯವರ ಕುಟುಂಬ ಮನೆ ಮುಂದಿನ ರಸ್ತೆಗಾಗಿ ಕಳೆದ ೨೩ ವರ್ಷಗಳಿಂದ ಪರದಾಡುತ್ತಿದ್ದಾರೆ. ಈ ಕುಟುಂಬಕ್ಕೆ ಸುಮಾರು ೨ ಎಕರೆ ಸ್ಥಳ ಇದೆ. ಅಲ್ಲಿ ಒಂದಷ್ಟು ಕೃಷಿ ಇದೆ. ಈ ಸ್ಥಳ ಚೆನ್ನಪ್ಪ ನಾಯ್ಕರ ತಂದೆ ತಿಮ್ಮ ನಾಯ್ಕರಿಗೆ ೧೯೭೦-೭೧ರಲ್ಲಿ ಮಂಜೂರಾದ ದರ್ಖಾಸ್ತು ಆಸ್ತಿ. ಅವರ ಮರಣಾ ನಂತರ ಚೆನ್ನಪ್ಪ ನಾಯ್ಕ ಅವರಿಗೆ ಖಾತಾ ಬದಲಾವಣೆಯಾಗಿದೆ.
ಪ್ರಸ್ತುತ ಈ ಮನೆಯಲ್ಲಿ ಮರದಿಂದ ಬಿದ್ದು ಶ್ರಮದ ಕೆಲಸ ಮಾಡಲಾರದ ಮಗ, ಅನಾರೋಗ್ಯದಿಂದ ಬಳಲುತ್ತಿರುವ ಜಾನಕಿ ಅವರು ವಾಸ್ತವ್ಯ ಇದ್ದಾರೆ. ಈ ಮನೆಯ ಭಾಗದಲ್ಲಿ ೪೬ ಸೆಂಟ್ಸ್ ಸ್ಥಳ ಸರ್ಕಾರಿ ಭೂಮಿ ಇದೆ. ಇದೇ ಭೂಮಿಯಲ್ಲಿ ರಸ್ತೆ ಆಗಬೇಕಿತ್ತು. ಆದರೆ ಆಗಿಲ್ಲ. ಕಾರಣ ಈ ಸರ್ಕಾರಿ ಭೂಮಿಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಸರ್ಕಾರಿ ಭೂಮಿಯನ್ನು ಇಲ್ಲಿನ ಪದ್ಮನಾಭ ರೈ ಹಾಗೂ ವಿಶ್ವನಾಥ ರೈ ಎಂಬವರ ಕುಟುಂಬ ಸ್ವಾಧೀನ ಪಡಿಸಿಕೊಂಡಿದ್ದು, ಇಲ್ಲಿ ಮನೆಯೊಂದನ್ನು ನಿರ್ಮಾಣ ಮಾಡಿದ್ದಾರೆ. ಈ ಜಾಗದಲ್ಲಿ ಜಾನಕಿ ಅವರ ಮನೆಗೆ ಸಂಪರ್ಕ ರಸ್ತೆ ಮಾಡಲು ಈ ಕುಟುಂಬ ಅಡ್ಡಿಪಡಿಸುತ್ತಿದೆ. ಅನಧಿಕೃತವಾಗಿ ಭೂಮಿ ಸ್ವಾಧೀನ ಪಡಿಸಿಕೊಂಡಿರುವ ಶ್ರೀಮಂತ ಕುಟುಂಬ ಈ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡಕುಟುಂಬಕ್ಕೆ ರಸ್ತೆಯ ಮೂಲಭೂತ ಸೌಕರ್ಯವೇ ಇಲ್ಲದಂತಾಗಿದೆ.
ಉಗ್ರಪ್ರತಿಭಟನೆಯ ಎಚ್ಚರಿಕೆ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಬಡ ಕುಟಂಬಕ್ಕೆ ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಲಾಗಿದೆ. ಸರ್ಕಾರಿ ಭೂಮಿಯನ್ನು ಅನಧಿಕೃತವಾಗಿ ಸ್ವಾಧೀನ ಪಡಿಸಿಕೊಂಡಿರುವ ಕುಟುಂಬದಿಂದ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸಲಾಗಿದೆ. ಅಧಿಕಾರಿಗಳು ತಕ್ಷಣ ಈ ರಸ್ತೆ ಸಂಪರ್ಕ ವ್ಯವಸ್ಥೆ ಮಾಡಿಸದೇ ಇದ್ದರೆ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ರಾಜ್ಯಾಧ್ಯಕ್ಷ ಗಿರಿಧರ್ ನಾಯ್ಕ ಅವರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ವೇದಿಕೆಯ ಮಾಣಿ ವಲಯ ಅಧ್ಯಕ್ಷೆ ಅಕ್ಚತಾ, ಸದಸ್ಯ ಸುಬ್ರಾಯ, ಜಾನಕಿ ಅವರ ಪುತ್ರ ಅಕ್ಷಯ್ ಕಡೇಶಿವಾಲಯ ಹಾಗೂ ಸಂಬಂಧಿಕ ಪ್ರಶಾಂತ್ ಉಪಸ್ಥಿತರಿದ್ದರು.